ಮೆಟಾ-ಮಾಲೀಕತ್ವದ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ತನ್ನ ಡೆಸ್ಕ್ಟಾಪ್ ಬೀಟಾ ಪರೀಕ್ಷಕರಿಗೆ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ. ವಿಂಡೋಸ್ ಬಳಕೆದಾರರಿಗೆ ಅಪರಿಚಿತ ಫೋನ್ ಸಂಖ್ಯೆ ಅಥವಾ ತಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಇಲ್ಲದ ಫೋನ್ ಸಂಖ್ಯೆಗಳೊಂದಿಗೆ ಚಾಟ್ಗಳನ್ನು ಮಾಡಲು ಅನುವು ಮಾಡಿಕೊಡುವಂತಹ ಫೀಚರ್ ಇದಾಗಿದೆ.
ಸದ್ಯದ ವರದಿಯ ಪ್ರಕಾರ ವಾಟ್ಸಾಪ್ ಹೊಸ ಸ್ಕ್ರೀನ್ ಅನ್ನು ಪರಿಚಯಿಸುತ್ತಿದೆ. ಅದರಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೀವು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಇಲ್ಲದ ಹೊಸ ಫೋನ್ ನಂಬರ್ ಅನ್ನು ನಮೂದಿಸಿ ತಕ್ಷಣ ಚಾಟಿಂಗ್ ಆರಂಭಿಸಬಹುದಾಗಿದೆ. ಅಂದರೆ ಸಂವಹನವನ್ನು ಇನ್ನಷ್ಟು ಸುಲಭ ಮತ್ತು ಸರಳವಾಗಿಸುವ ಸಲುವಾಗಿ ವಾಟ್ಸಾಪ್ ಇಂತಹದ್ದೊಂದು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ.
ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಈ ವೈಶಿಷ್ಟ್ಯತೆ ಲಭ್ಯತೆಯನ್ನು ಪರಿಶೀಲಿಸಲು ನೀವು ಬಯಸಿದರೆ, `ನ್ಯೂ ಚಾಟ್’ ಅನ್ನು ತೆರೆಯಿರಿ. ನಿಮ್ಮ ಡಿಪಿಯ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯನ್ನು ಕ್ಲಿಕ್ ಮಾಡಿದರೆ ಹೊಸ ಚಾಟ್ ಪರದೆ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ `ಫೋನ್ ನಂಬರ್’ ಎಂಬ ಹೊಸ ಎಂಟ್ರಿ ಪಾಯಿಂಟ್ ಕಾಣಬೇಕು.
ಹೊಸ ಚಾಟ್ ಪರದೆಯೊಳಗಿನ ಸರ್ಚ್ ಬಾರ್ನಲ್ಲಿ ನಮೂದಿಸುವ ಮೂಲಕ ನೀವು ಫೋನ್ ಸಂಖ್ಯೆಗಳನ್ನು ಹುಡುಕುವುದನ್ನು ಮುಂದುವರಿಸಬಹುದು ಎಂಬುದೂ ಗಮನಾರ್ಹ. ಇದನ್ನು ಹಿಂದಿನ ಅಪ್ಡೇಟ್ನಲ್ಲಿ ಈಗಾಗಲೇ ಅಳವಡಿಸಲಾಗಿದೆ.