ಬೆಂಗಳೂರು:- ಬಡವರ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಾವು ಬಿಡುವುದಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಬಡವರ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು. ಶಿಕ್ಷಣ ತಜ್ಞರು, ಹಿರಿಯರು, ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ 5 ವರ್ಷಗಳಲ್ಲಿ 350 ಕೋಟಿ ರೂ. ಹಣಕಾಸು ಕೊಡಲು ಸಾಧ್ಯವಿಲ್ಲದ ಕಾರಣ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರದ ಕ್ಯಾಬಿನೆಟ್ ಉಪ ಸಮಿತಿ ಕೊಟ್ಟ ವರದಿಯು ವಿವಿಗಳನ್ನು ಮುಚ್ಚುವ ಸರ್ಕಾರದ ತೀರ್ಮಾನ ಅವೈಜ್ಞಾನಿಕ. ಇದು ಅವಿವೇಕತನದ ನಿರ್ಧಾರ ಎಂದು ವಾಗ್ದಾಳಿ ನಡೆಸಿದರು
ಇದರ ವಿರುದ್ಧ ರಾಜಕೀಯೇತರ ನೆಲೆಯಿಂದ ಹೋರಾಟ ಮಾಡಬೇಕಿದೆ. ವಿದ್ಯಾರ್ಥಿ ಪರಿಷತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಬಿಜೆಪಿ ಕೂಡ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡಲಿದೆ. ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ. ಒಂದು ಜಿಲ್ಲೆ ಒಂದು ವಿವಿ ಪರಿಕಲ್ಪನೆಯಡಿ ಈ ವಿವಿಗಳನ್ನು ರಚಿಸಲಾಗಿದೆ. ಹಣಕಾಸಿನ ಬಿಕ್ಕಟ್ಟನ್ನೇ ಆಧಾರವಾಗಿ ಇಟ್ಟುಕೊಂಡು ರಾಜ್ಯ ಸರ್ಕಾರ ಅವಿವೇಕತನದ ನಿರ್ಧಾರ ತೆಗೆದುಕೊಳ್ಳಬಾರದು. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.