ಕನಕಪುರ, ನ. 24:“ಚನ್ನಪಟ್ಟಣದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ಮನೆ, ನಿವೇಶನ ಹಂಚಿಕೆ, ಬಗರ್ ಹುಕುಂ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಚುನಾವಣೆಗೆ ಮುಂಚಿತವಾಗಿ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ಕನಕಪುರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿದರು.
ಗೆಲುವಿನ ನಂತರ ಚನ್ನಪಟ್ಟಣದ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳೇನು ಎನ್ನುವ ಪ್ರಶ್ನೆಗೆ, “ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾದ ನಂತರ ಕೆಂಗಲ್ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ಜನರ ಸಮಸ್ಯೆಗಳನ್ನು ಆಲಿಸಲಾಯಿತು. ಈಗ ನಮಗೆ ಜನತೆ ಆಶೀರ್ವಾದ ಮಾಡಿದ್ದಾರೆ. ಅವರ ಋಣದ ಸಾಲದ ಹೊರೆ ಹೊರಿಸಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕ ಆ ಋಣ ತೀರಿಸಲಾಗುವುದು” ಎಂದರು.
ರೈತರೇ ಗಮನಿಸಿ.. “ಗಂಗಾ ಕಲ್ಯಾಣ ಯೋಜನೆ”ಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ!
“ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಕಾಲಿನ ಶಸ್ತ್ರ ಚಿಕಿತ್ಸೆಯಾಗಿದೆ. ಅವರು ಗುಣಮುಖರಾದ ನಂತರ ಬೆಳಗಾವಿ ಅಧಿವೇಶನಕ್ಕೆ ತೆರಳುವ ಮೊದಲು ಯೋಗೇಶ್ವರ್ ಅವರ ಜತೆಗೆ ಅಧಿಕಾರಿಗಳ ಸಭೆ ಕರೆದು ನಿವೇಶನ, ಮನೆ ಹಂಚಿಕೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಎಲ್ಲಾ ಕೆಲಸಗಳಿಗೆ ಚಾಲನೆ ನೀಡಲಿದ್ದೇವೆ” ಎಂದು ಹೇಳಿದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ 16 ಸಾವಿರ ಮತಗಳು ಬಂದಿದ್ದವು. ಲೋಕಸಭೆಯಲ್ಲಿ ಮತಗಳಿಕೆ ಹೆಚ್ಚಾಗಿತ್ತು, ಈ ಉಪ ಚುನಾವಣೆಯಲ್ಲಿ ಬಿಜೆಪಿ, ಜನತಾದಳದ ನಾಯಕರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ದೊರೆತ ಕಾರಣಕ್ಕೆ ನಮಗೆ ಇಷ್ಟೊಂದು ಮತಗಳು ಬಂದಿವೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಎಲ್ಲರೂ ಒಟ್ಟಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡೋಣ” ಎಂದು ತಿಳಿಸಿದರು.
ಗೆಲುವಿನ ಶ್ರಮ ಎಲ್ಲರಿಗೂ ಸೇರಬೇಕು, ಅಪೂರ್ವ ಸಹೋದರರಿಗೆ ಅಲ್ಲ
ಗೆಲುವಿನ ಶ್ರಮ ಯಾರಿಗೆ ಸೇರಬೇಕು ಎಂದು ಕೇಳಿದಾಗ, “ಇದು ಒಬ್ಬರಿಗೆ ಸೇರುವ ಗೆಲುವಲ್ಲ. ಎಲ್ಲರೂ ಸೇರಿ ಶ್ರಮಪಟ್ಟ ಕಾರಣಕ್ಕೆ ಗೆಲುವು ದೊರೆತಿದೆ. ಅಪೂರ್ವ ಸಹೋದರರಿಗೆ ಗೆಲುವಿನ ಗರಿ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಯೋಗೇಶ್ವರ್ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಮತದಾರರು ನಮ್ಮ ಪರ ನಿಂತಿದ್ದಾರೆ. ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿ, ಗೆಲ್ಲಿಸಿದ್ದಾರೆ” ಎಂದರು.
ಜೆಡಿಎಸ್ ಮುಕ್ತ ಮುಖ್ಯವಲ್ಲ
ರಾಮನಗರ ಜಿಲ್ಲೆ ಜೆಡಿಎಸ್ ಮುಕ್ತವಾಯಿತೇ ಎಂದು ಕೇಳಿದಾಗ, “ಜೆಡಿಎಸ್ ಮುಕ್ತ ಮಾಡುವುದು ನಮಗೆ ಮುಖ್ಯವಲ್ಲ. 19 ಇದ್ದ ಆ ಪಕ್ಷದ ಶಾಸಕರ ಸಂಖ್ಯೆ 18 ಕ್ಕೆ ಇಳಿದಿದೆ” ಎಂದರು.
ಉಪಚುನಾವಣೆ ಗೆಲುವಿನ ನಂತರ ಶಿವಕುಮಾರ್ ಅವರು ಸಿಎಂ ಆಗಬೇಕು ಎನ್ನುವ ಕೂಗಿನ ಬಗ್ಗೆ ಕೇಳಿದಾಗ, “ನಾನು, ಅವರು, ಇವರು ಮುಖ್ಯಮಂತ್ರಿಯಾಗಬೇಕು ಎನ್ನುವುದೆಲ್ಲಾ ಇಲ್ಲಿ ಗೌಣ. ನಮಗೆ ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ನಾವು ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸಬೇಕು” ಎಂದರು.
ಮುಖ್ಯಮಂತ್ರಿಗಳನ್ನು ಕೇಳಿ ನೋಡಿ
ಸಂಪುಟ ಪುನರ್ ರಚನೆಗೆ ಒತ್ತಾಯ ಕೇಳಿ ಬರುತ್ತಿದೆಯೇ ಎಂದು ಕೇಳಿದಾಗ, “ಅದೆಲ್ಲಾ ಸುಳ್ಳು. ಯಾವ ಒತ್ತಾಯವೂ ಇಲ್ಲ. ಏನಿದ್ದರೂ ಮುಖ್ಯಮಂತ್ರಿಗಳನ್ನು ಕೇಳಿ ನೋಡಿ” ಎಂದರು.
ಕಾಂಗ್ರೆಸ್ ಸೇರಲು ಬಿಜೆಪಿಯವರೂ ಬಯಸಿದ್ದಾರೆ
ಜನರು ಬಯಸಿದರೆ ಕಾಂಗ್ರೆಸ್ ಸೇರುವುದಾಗಿ ಜಿ. ಟಿ. ದೇವೇಗೌಡರ ಹೇಳಿಕೆಯ ಬಗ್ಗೆ ಕೇಳಿದಾಗ, “ಇದು ಜಿಟಿಡಿ ಅವರೊಬ್ಬರ ಅಭಿಪ್ರಾಯ ಅಲ್ಲ, ಬಹಳಷ್ಟು ಜನ ಬಿಜೆಪಿಯವರು ಇದೇ ಅಭಿಪ್ರಾಯ ಹೊಂದಿದ್ದಾರೆ. ಬಿಜೆಪಿಯವರು ಬೆಂಬಲ ನೀಡದೆ ಇದ್ದಿದ್ದರೆ ನಾವು ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿತ್ತೇ” ಎಂದು ಮರುಪ್ರಶ್ನಿಸಿದರು.
ಅಶ್ವತ್ ನಾರಾಯಣ್ ದಡ್ಡರೇ?
ಕಾಂಗ್ರೆಸ್ ಗೆಲುವಿಗೆ ರಾಜ್ಯ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆಯೇ ಎಂದಾಗ, “ಶನಿವಾರದಂದು ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರು ‘ನನಗೆ ಮೊದಲೇ ತಿಳಿದಿತ್ತು, ಯೋಗೇಶ್ವರ್ ಅವರು ಗೆಲ್ಲುತ್ತಾರೆ” ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಈ ರೀತಿ ಹೇಳಲು ದಡ್ಡರೇ?. ಅವರಿಗೆ ಜನರ ನಾಡಿ ಮಿಡಿತ ಗೊತ್ತಿತ್ತು” ಎಂದರು.
“ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಬಿಡೋಣ. ಎದುರಾಳಿ ಪಕ್ಷದವರು ಗುರುತು ಮಾಡಿಕೊಂಡು ಪ್ರತಿದಿನ ಒಂದಷ್ಟು ಜನರ ಮನೆಗೆ ಹೋಗುತ್ತಾ ಇದ್ದರು. ಅವರು ಹಾಗೂ ಅವರ ಬೂತ್ ಗಳಲ್ಲಿ ಯಾರಿಗೆ ಮತ ಬಿದ್ದಿದೆ ಎಂಬುದನ್ನು ಪರಿಶೀಲನೆ ಮಾಡಿ. ಎಲ್ಲವನ್ನೂ ಬಿಚ್ಚಿ ಹೇಳಲು ಹೋಗುವುದಿಲ್ಲ” ಎಂದರು.
ಬಿಜೆಪಿ ನಾಯಕರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದೀರಿ. ಕಾಂಗ್ರೆಸ್ ಪಕ್ಷದ ಮೇಲಿನ ಒಲವೇ? ಅಥವಾ ಕುಮಾರಸ್ವಾಮಿ ಅವರ ಮೇಲಿನ ಸಿಟ್ಟೆ? ಎಂದಾಗ, “ಅದು ನನಗೆ ಗೊತ್ತಿಲ್ಲ. ತಟ್ಟೆಮರೆ ಏಟು. ಹೆಂಗೆ ಬಿದ್ದಿದೆಯೋ ನೋಡಿಕೊಳ್ಳಬೇಕು” ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರು ನನ್ನ ಮಗನ ವಿರುದ್ಧ ಷಡ್ಯಂತ್ರ ಮಾಡಿ ಚುನಾವಣೆಯಲ್ಲಿ ಸೋಲಿಸಿದರು ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರು ಈ ಚುನಾವಣೆಯಲ್ಲಿ ಹಣಬಲದ ಬಗ್ಗೆ ಮಾತನಾಡುತ್ತಿದ್ದಾರೆ ಎಂದಾಗ, “ಹಾಗಾದರೆ ಡಿ.ಕೆ. ಸುರೇಶ್ ಅವರ ಸೋಲನ್ನು ಏನೆಂದು ಕರೆಯುವುದು? ಇದೇ ಯೋಗೇಶ್ವರ್ ಅವರು ಆಗ ಬಿಜೆಪಿಯಲ್ಲಿದ್ದರು. ಕುಮಾರಸ್ವಾಮಿ ಅವರು ತಮ್ಮ ಜನತಾದಳ ಮನೆತನದ ಬಾಮೈದನನ್ನು ಬಿಜೆಪಿಯಿಂದ ನಿಲ್ಲಿಸಿ ಗೆಲ್ಲಿಸಿದರು. ಇದಕ್ಕೆ ಯಾವ ಪದವನ್ನು ಜೋಡಣೆ ಮಾಡುತ್ತೀರಿ?” ಎಂದರು. ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಗುರಿಯಾಗಿಸಿಕೊಂಡಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಇದಕ್ಕೆಲ್ಲ ಸಮಯವೇ ಉತ್ತರ ಕೊಡುತ್ತದೆ” ಎಂದರು.