ಬೆಂಗಳೂರು: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣಕಾಸು ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಘೋಷಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ (Vidhanasoudha) ಗ್ರ್ಯಾಂಡ್ ಸ್ಟೆಪ್ಸ್ ಬಳಿ ನೂತನ 262 ಅಂಬುಲೆನ್ಸ್ಗಳ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಯಾರೂ ಚಿಕಿತ್ಸೆ ಸಿಗದೇ ಸಾಯಬಾರದು. ಅಪಘಾತ ವೇಳೆ, ಹೆರಿಗೆ ವೇಳೆ ಚಿಕಿತ್ಸೆ, ಹೃದಯಾಘಾತ ಹೀಗೆ ಆದಾಗ ಚಿಕಿತ್ಸೆ ಸಿಗದೇ ಸಾಯಬಾರದು. ಅದಕ್ಕಾಗಿಯೇ 2008 ರಲ್ಲಿ ತುರ್ತು ಆರೋಗ್ಯಸೇವೆ ತರಲಾಯ್ತು. 236 ತಾಲೂಕುಗಳಿದ್ದು, ತಲಾ ನಾಲ್ಕರಂತೆ ಕನಿಷ್ಟ 840 ಅಂಬುಲೆನ್ಸ್ ಇರಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದರೆ ಬಹಳ ಅನುಕೂಲ ಆಗುತ್ತೆ ಎಂದು ಹೇಳಿದರು.
ಹೆಚ್ಚುವರಿ ಅಂಬುಲೆನ್ಸ್ (Ambulance) ಖರೀದಿಗೆ ಹಣಕಾಸು ಒದಗಿಸ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕಿತ್ತು. ವಿವಿಧ ಸ್ಕ್ಯಾನ್ಗಳಿಗೆ ಬಡವರು ವೆಚ್ಚ ಭರಿಸಲು ಆಗಲ್ಲ. ಇಲ್ಲಿಯವರೆಗೆ 25 ಕೋಟಿ ಜನರಿಗೆ ಸಿಎಂ ನಿಧಿಯಡಿ ಪರಿಹಾರ ಕೊಡುವ ಕೆಲಸ ಆಗಿದೆ. ನಾನು ಸಿಎಂ ನಿಧಿಯಡಿ 1/4 ವೆಚ್ಚ ಭರಿಸ್ತೇನೆ. ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡುತ್ತಾರೆ ಅನ್ನೋ ಭಾವನೆ ಇದೆ. ಜಯದೇವ ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆ ಇದೆ ಅಂದ್ರೆ ಬೇರೆ ಕಡೆಯೂ ಕೊಡೋಕ್ಕಾಗುತ್ತೆ. ಈಗ ಸರ್ಕಾರಿ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿದ್ದೇನೆ. ಈಗ ಮೆಡಿಕಲ್ ಕಾಲೇಜುಗಳು ಜಾಸ್ತಿಯಾಗಿ ಡಾಕ್ಟರ್ ಗಳೂ ಜಾಸ್ತಿಯಾಗಿ ಬಿಟ್ಟಿದ್ದಾರೆ. ವೈದ್ಯರ ಹುದ್ದೆ ಭರ್ತಿಗೆ ಉತ್ತರ ಕರ್ನಾಟಕಕ್ಕೂ ಹೆಚ್ಚು ಗಮನ ಕೊಡಲು ಹೇಳಿದ್ದೇನೆ ಎಂದರು