ಹಾಸನ:- ಜೆಡಿಎಸ್-ಬಿಜೆಪಿ ನಿಜವಾದ ಬಂಡವಾಳ ಶೀಘ್ರ ಹೊರಬರಲಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮುಂದೆ ಬರಲಿರುವ ಸಂಸದರ ಚುನಾವಣೆ ಹೊತ್ತಿಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ನಿಜವಾದ ಬಂಡವಾಳ ಹೊರಗೆ ಬರಲಿದೆ ಎಂದರು.
ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆ ಎರಡು ಪಕ್ಷಗಳ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದೆ. ಆದರೆ ಕೇಂದ್ರಸರ್ಕಾರ ರಾಜ್ಯಕ್ಕೆ ಅಗತ್ಯ ನೆರವನ್ನು ನೀಡುತ್ತಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿಯವರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬರದ ಸಂಕಷ್ಟಕ್ಕೆ ಈಡಾಗಿರುವ ಜನರ ನೋವನ್ನು ಕೇಳುತ್ತಿಲ್ಲ. ಬದಲಿಗೆ ಐದು ರಾಜ್ಯದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಆರೋಪ ಮಾಡುವುದು ಬಿಟ್ಟರೆ ದೇಶದ ಅಭಿವೃದ್ಧಿಯ ಕಡೆ ಗಮನ ಇಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದಲ್ಲಿಯೇ ಭಿನ್ನಾಭಿಪ್ರಾಯ ಇದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಎಲ್ಲ ಪಕ್ಷದಲ್ಲಿಯೂ ಭಿನ್ನಾಭಿಪ್ರಾಯ ಸಾಮಾನ್ಯ. ನಮ್ಮಲ್ಲಿ ಯಾವುದೇ ಬಣ, ಗುಂಪು, ಗೊಂದಲ ಇಲ್ಲ ಎಂದರು.
ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತಿದ್ದು, ಮಾದಕ ವಸ್ತು ಕಳ್ಳಸಾಗಣೆ ಸೇರಿದಂತೆ ಇತರೆ ಅಕ್ರಮಗಳನ್ನು ತಡೆಯುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲಾಖೆಯಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆ ನೀಗಿಸುವ ಬಗ್ಗೆ ಚಿಂತಿಸಲಾಗಿದೆ. ರಾಜ್ಯದಲ್ಲಿ ಕಾಕಂಬಿ ಮಾರಾಟ ಸೇರಿದಂತೆ ಕಲಬೆರಕೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತಿದೆ. ಪ್ರಸ್ತುತದಲ್ಲಿ ಕೇವಲ ಒಂದು ಪರ್ಸೆಂಟ್ ಇಂತಹ ಪ್ರಕರಣಗಳು ವರದಿಯಾಗುತ್ತಿದ್ದು, ಅದನ್ನು ಸಹ ಹತೋಟಿಗೆ ತರುವ ಕೆಲಸವನ್ನು ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.