ಬೆಂಗಳೂರು:– ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಕಿಡಿ ಕಾರಿದರು.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಕೆಶಿಗೆ ಒಂದು ನ್ಯಾಯ, ಸಚಿವ ನಾಗೇಂದ್ರಗೆ ಒಂದು ನ್ಯಾಯ ಸಿಕ್ಕಿದೆ. ಇದೇ ಸಿದ್ದರಾಮಯ್ಯ ಹಿಂದೆ ನಾಗೇಂದ್ರ ವಿರುದ್ಧ 8-10 ಕೇಸ್ ಗಳಲ್ಲಿ ತನಿಖೆಗೆ ಅನುಮತಿ ಕೊಟ್ಟಿದ್ರು. ನಾಗೇಂದ್ರರನ್ನು ಈಗ ಅವರದ್ದೇ ಸಂಪುಟದಲ್ಲಿ ಸಿದ್ದರಾಮಯ್ಯ ಸಚಿವ ಮಾಡಿದ್ದಾರೆ. ಆದರೆ ನಾಗೇಂದ್ರ 8-10 ಪ್ರಕರಣಗಳಲ್ಲಿ ಈಗಲೂ ತನಿಖೆ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಚಾರ್ಜ್ ಶೀಟ್ ಸಹ ಹಾಕಲಾಗಿದೆ. ಡಿಕೆಶಿ ವಿರುದ್ಧ ಸಿಬಿಐ ಅನುಮತಿ ವಾಪಸ್ ಪಡೆದ ಸಿದ್ದರಾಮಯ್ಯ ನಾಗೇಂದ್ರ ವಿರುದ್ಧದ ಪ್ರಕರಣಗಳಲ್ಲೂ ಅನುಮತಿ ವಾಪಸ್ ಪಡೆಯಲಿ. ಸಿದ್ದರಾಮಯ್ಯ ಡಿಕೆಶಿಗೆ ಒಂದು ನ್ಯಾಯ – ನಾಗೇಂದ್ರ ಗೆ ಒಂದು ನ್ಯಾಯ ಕೊಡಬಾರದು. ನಾಗೇಂದ್ರ ವಿರುದ್ಧ ಇರುವ ಪ್ರಕರಣಗಳಲ್ಲಿ ತನಿಖೆಗೆ ಕೊಟ್ಟಿರುವ ಅನುಮತಿಗಳನ್ನು ವಾಪಸ್ ಪಡೆಯಲಿ ಎಂದು ಸವಾಲು ಹಾಕಿದರು.
ಕೆಆರ್ಪಿಪಿ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡ್ತಿದ್ದೇವೆ. ನಾನು ಪ್ರತೀ ಗ್ರಾಮಕ್ಕೂ ಭೇಟಿ ಕೊಡ್ತೇನೆ. 2028ಕ್ಕೆ ಖಂಡಿತವಾಗಿ ನಮ್ಮ ಪಕ್ಷಕ್ಕೆ ಜಯ ಸಿಗಲಿದೆ. ನಾವು ಜನಾಶೀರ್ವಾದ ಪಡೆಯುತ್ತೇವೆ. ಪಕ್ಷ ಸ್ಥಾಪನೆ ಮಾಡಿದ ಬಳಿಕ ನನಗೆ ಕೇವಲ ನಾಲ್ಕು ತಿಂಗಳ ಅವಕಾಶ ಇತ್ತು.
ಬಳ್ಳಾರಿಗೆ ನಾನು ಹೋಗದೇ ಇರುವಂತಹ ಸ್ಥಿತಿಯಲ್ಲಿ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಒಳ್ಳೆಯ ಪೈಪೋಟಿ ಕೊಟ್ಟಿದ್ದೇವೆ. ಪ್ರಾದೇಶಿಕ ಪಕ್ಷಗಳು ಆರಂಭವಾಗುವುದೇ ಒಂದು ಎರಡು ಸೀಟುಗಳಿಂದ. ಬಿಜೆಪಿ ಕೂಡಾ ಎರಡು ಸೀಟ್ ಗಳಿಂದಲೇ ಆರಂಭವಾಗಿದ್ದು.ಇಂದು ಕೆಆರ್ ಪಿಪಿ ಒಂದು ಸೀಟ್ ನಿಂದ ಆರಂಭವಾಗಿದೆ. 2028ರ ವಿಧಾನಸಭಾ ಚುನಾವಣೆಗೆ ಇಡೀ ರಾಜ್ಯಕ್ಕೆ ನಾನು ತಲುಪುವ ಆತ್ಮ ವಿಶ್ವಾಸ ಇದೆ. ಈ ವಿಶ್ವಾಸದಿಂದಲೇ ನಾನು ಗಂಗಾವತಿ ಕ್ಷೇತ್ರಕ್ಕೆ ಹೋಗಿದ್ದೆ. ಬೇರೆಯವರ ರೀತಿ ನಾನು ಎರಡೆರಡು ಕ್ಷೇತ್ರಗಳಲ್ಲಿ ಸ್ಫರ್ಧೆ ಮಾಡಲಿಲ್ಲ. ಗಂಗಾವತಿಯಲ್ಲಿ ರಾಷ್ಟ್ರೀಯ ಪಕ್ಷಗಳು ಹಿಂದೂ-ಮುಸ್ಲಿಂ ಸಖ್ಯತೆಯನ್ನು ಒಡೆದು ಹಾಕಿದ್ದರು. ಅಧಿಕಾರಕ್ಕೋಸ್ಕರ ಸಮಾಜದಲ್ಲಿ ಒಡಕು ತರಲಾಗ್ತಿದೆ. ಅಧಿಕಾರಕ್ಕೋಸ್ಕರ ಪಕ್ಷಗಳು ಸಮಾಜದಲ್ಲಿ ಒಡಕು ತರ್ತಿವೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಲ್ಲೇ ಜಾತಿ ಜನಗಣತಿ ಬಗ್ಗೆ ಗೊಂದಲಗಳಿವೆ. ವೈಜ್ಞಾನಿಕವಾಗಿ ಜಾತಿಜನಗಣತಿ ಆಗಿದೆಯಾ ಅಂತ ಸರ್ಕಾರ ಇನ್ನೂ ಸ್ಪಷ್ಟ ಪಡಿಸಿಲ್ಲ.ಅವೈಜ್ಞಾನಿಕವಾಗಿ ಜಾತಿ ಜನಗಣತಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಜಾತಿಗಣತಿಯಿಂದಾಗಿ ಧರ್ಮಗಳ ನಡುವೆ, ಜಾತಿಗಳ ನಡುವೆ ದ್ವೇಷ ಮೂಡಬಹುದು.ಇದೆಲ್ಲ ಜನರಿಗೆ ಅರ್ಥ ಆಗಿದೆ. ಹೀಗಾಗಿ ಈ ಜಾತಿಗಣತಿಗೆ ನಮ್ಮ ವಿರೋಧ ಇದೆ ಎಂದರು.