ವಯನಾಡ್:- ವಯನಾಡ್ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಜತೆ ಇಡೀ ದೇಶವೆ ಇದೆ ಎಂದು ಪಿಎಂ ಮೋದಿ ಭರವಸೆ ನೀಡಿದ್ದಾರೆ.
ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಮಳೆ ಆರ್ಭಟ: ಮನೆ ಗೋಡೆ ಸಂಪೂರ್ಣ ಹಾನಿ: ಪರಿಹಾರಕ್ಕೆ ಸಂತ್ರಸ್ತರ ಮನವಿ!
ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸಂತಾಪ ವ್ಯಕ್ತಪಡಿಸಿ, “ನಾವೆಲ್ಲರೂ ಒಗ್ಗೂಡಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಹಾಯ ಮಾಡಬೇಕು. ದುರಂತದಲ್ಲಿ ನೂರಾರು ಕುಟುಂಬಗಳ ಕನಸುಗಳು ನಲುಗಿವೆ. ಪ್ರಕೃತಿ ತನ್ನ ಉಗ್ರ ರೂಪವನ್ನು ತೋರಿಸಿದೆ, ನಾನು ಅಲ್ಲಿಗೆ ಹೋಗಿ ನೋಡಿದೆ ಎಂದು ಹೇಳಿದ್ದಾರೆ.
ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿ ಮಾಡಿದ ಅನುಭವವನ್ನೂ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ನಾನು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅವರ ನೋವನ್ನು ಆಲಿಸಿದ್ದೇನೆ. ನಾನು ಆಸ್ಪತ್ರೆಗೆ ಹೋಗಿ ಅಲ್ಲಿ ಗಾಯಾಳುಗಳನ್ನು ಭೇಟಿಯಾದೆ. ವಯನಾಡಿನಲ್ಲಿ ಭೂಕುಸಿತದ ಘಟನೆಯ ನಂತರ ನಾನು ತಕ್ಷಣವೇ ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಸಹಾಯವನ್ನು ಕಳುಹಿಸಿದೆ. ಎಲ್ಲರೂ ಆಪತ್ತಿನಲ್ಲಿ ಸಹಾಯ ಮಾಡಲು ಮುಂದೆ ಬಂದರು. ಭಾರತ ಸರ್ಕಾರ ಮತ್ತು ಇಡೀ ದೇಶವು ಸಂತ್ರಸ್ತರೊಂದಿಗಿದೆ ಎಂದು ಅವರು ಹೇಳಿದ್ದಾರೆ.
“ನಾನು ರಾಜ್ಯದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಘಟನೆಯ ನಂತರ ಪ್ರತಿ ಕ್ಷಣವೂ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ. ಘಟನೆಯಲ್ಲಿ ನೂರಾರು ಕುಟುಂಬಗಳ ಕನಸುಗಳು ಭಗ್ನವಾಗಿವೆ. ಈ ರೀತಿಯ ಬಿಕ್ಕಟ್ಟಿನ ಸಮಯದಲ್ಲಿ, ನಾವು ಒಟ್ಟಾಗಿ ಕೆಲಸ ಮಾಡಿದಾಗ, ನಾವು ಉತ್ತಮ ಫಲಿತಾಂಶವನ್ನು ಪಡೆಯುತ್ತೇವೆ. ಘಟನೆಯ ನಂತರ, ಎಲ್ಲರೂ ವಿಪತ್ತು ಪೀಡಿತ ಜನರನ್ನು ತಲುಪಲು ಪ್ರಯತ್ನಿಸಿದರು, ”ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಂತ್ರಸ್ತರಿಗೆ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದ ಪ್ರಧಾನಿ ಮೋದಿ, “ಈ ಬಿಕ್ಕಟ್ಟಿನಲ್ಲಿ ನಾವು ಅವರೊಂದಿಗಿದ್ದೇವೆ ಎಂದು ನಾನು ಎಲ್ಲಾ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಭರವಸೆ ನೀಡುತ್ತೇನೆ. ಸರಕಾರ ನಿಯಮಾವಳಿ ಪ್ರಕಾರ ಆರ್ಥಿಕ ನೆರವು ನೀಡಿದ್ದು, ಹೆಚ್ಚಿನ ಹಣ ನೀಡಲು ಪ್ರಯತ್ನಿಸುತ್ತೇವೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರವು ಅತ್ಯಂತ ಉದಾರವಾದ ರೀತಿಯಲ್ಲಿ ಕೇರಳ ಸರ್ಕಾರದ ಜೊತೆ ನಿಲ್ಲುತ್ತದೆ ಎಂದಿದ್ದಾರೆ.