ಉತ್ತರ ಕನ್ನಡ:- ಮುರುಡೇಶ್ವರದಲ್ಲಿ ಕಡಲಬ್ಬರಕ್ಕೆ ಬೀಚ್ ಬಳಿಯಿದ್ದ ಗೂಡಂಗಡಿಗಳಿಗೆ ಹಾನಿ ಆಗಿರುವ ಘಟನೆ ಜರುಗಿದೆ.
ನಿನ್ನೆ ಸಂಕ್ರಾಂತಿ ಹಬ್ಬ ಹಿನ್ನೆಲೆ ಮುರುಡೇಶ್ವರನ ಸನ್ನಿಧಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಬೀಚ್ ಬಳಿ ಇದ್ದ ಗೂಡಂಗಡಿಗಳಲ್ಲಿನ ವಸ್ತುಗಳು ಸಮುದ್ರಪಾಲಾಗಿವೆ. ಇದರಿಂದಾಗಿ ಅಂಗಡಿ ಇಟ್ಟುಕೊಂಡಿದ್ದ ಮಾಲೀಕರೀಗ ಕಂಗಾಲಾಗಿದ್ದು ಕಣ್ಣೀರು ಹಾಕುವಂತ ಪರಿಸ್ಥಿತಿ ಎದುರಾಗಿದೆ.
ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಸಮುದ್ರದ ಅಲೆಗಳು ಕಣ್ಣೀರು ತರಿಸಿವೆ.
ನಿನ್ನೆ ರಾತ್ರಿ ಏಕಾಏಕಿ ಸಮುದ್ರದ ಅಬ್ಬರ ಹೆಚ್ಚಾದ ಹಿನ್ನೆಲೆ ಗೂಡಂಗಡಿಗಳು ಹಾನಿಗೊಳಗಾಗಿವೆ. ಸಮುದ್ರದ ಅಲೆಯಲ್ಲಿ ಗೂಡಂಗಡಿಗಳ ಹಲವು ಸಾಮಾನುಗಳು ಕೊಚ್ಚಿ ಹೋಗಿವೆ. ತನ್ನ ಅಂಗಡಿ ಹಾನಿಗೊಳಗಾದದ್ದು ನೋಡಿ ಮಹಿಳೆಯೊಬ್ಬರು ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿದೆ.