ಬೆಂಗಳೂರು: ನಗರದಲ್ಲಿ ತೀವ್ರ ನೀರಿನ ಸಮಸ್ಯೆಯಿಂದ ಬೆಂಗಳೂರಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು, ಈ ನಡುವೆ 15 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳು (IT Employees) ಮನೆಯಿಂದಲೇ ಕೆಲಸ (Work From Home) ಮಾಡಲು ಅವಕಾಶ ನೀಡುವಂತೆ ಕಂಪನಿಗಳನ್ನು ಒತ್ತಾಯಿಸಿರುವುದಾಗಿ ವರದಿಯಾಗಿದೆ
ಅಂಕಿಅಂಶಗಳ ಪ್ರಕಾರ, ನಗರಕ್ಕೆ ಪ್ರತಿ ದಿನ 2,600 ಎಂಎಲ್ಡಿ ನೀರಿನ ಅವಶ್ಯಕತೆ ಇದೆ. ಸದ್ಯ ಬೆಂಗಳೂರು ನಗರವು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ.
Illegal Borewells: ಬೆಂಗಳೂರಲ್ಲಿ ತಲೆ ಎತ್ತಿರುವ ಅಕ್ರಮ ಬೋರ್ವೆಲ್: ಜಲಮಂಡಳಿ ಅಧಿಕಾರಿಗಳು ಮಾಡಿದ್ದೇನು?
ನೀರಿನ ಬಿಕ್ಕಟ್ಟು ಹಲವಾರು ವಾರಗಳಿಂದ ಮುಂದುವರಿದಿರುವುದರಿಂದ ಕರ್ನಾಟಕ ಸರ್ಕಾರವು ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸುಮಾರು 15 ಲಕ್ಷ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಒದಗಿಸುವುದರಿಂದ ಅಲ್ಪಾವಧಿಯ ಪರಿಹಾರ ದೊರೆಯಲಿದೆ ಎಂದು ಕರ್ನಾಟಕ ಮತ್ತು ಅಸ್ಸಾಂನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದರಿಂದ ಸುಮಾರು 10 ಲಕ್ಷ ಜನ ಅವರ ಊರುಗಳಿಗೆ ಮರಳಬಹುದು. ಇದರಿಂದಾಗಿ ಬೆಂಗಳೂರಿನ ಸಂಪನ್ಮೂಲಗಳ ಮೇಲೆ ಸ್ವಲ್ಪ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಈ ವರ್ಷ ಬೇಸಿಗೆ ಹೆಚ್ಚು ತೀವ್ರವಾಗಿರುವ ಸಾಧ್ಯತೆ ಇದೆ ಎಂದು ಇಲಾಖೆ ಅಂದಾಜಿಸಿದೆ. ಫೆಬ್ರವರಿ 10 ರವರೆಗೆ ರಾಜ್ಯ ಸರ್ಕಾರವು ಮಾಡಿದ ಮೌಲ್ಯಮಾಪನದ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ಸುಮಾರು 7,082 ಗ್ರಾಮಗಳು ಮತ್ತು 1,193 ವಾರ್ಡ್ಗಳು ಕುಡಿಯುವ ನೀರಿನ ಸಮಸ್ಯೆಗೆ ಗುರಿಯಾಗಲಿವೆ.
ಸುಮಾರು 50 ಪ್ರತಿಶತದಷ್ಟು ಬೋರ್ವೆಲ್ಗಳು ಬತ್ತಿ ಹೋಗಿರುವ ನಗರದ ಅಂತರ್ಜಲ ಮೂಲಗಳನ್ನು ಮರುಪೂರಣಗೊಳಿಸಲು ಬೆಂಗಳೂರಿನ ಅಧಿಕಾರಿಗಳು ಒಣಗುತ್ತಿರುವ ಕೆರೆಗಳಿಗೆ ದಿನಕ್ಕೆ 1,300 ಮಿಲಿಯನ್ ಲೀಟರ್ ಶುದ್ಧೀಕರಿಸಿದ ನೀರನ್ನು ಮರುಪೂರಣಗೊಳಿಸಲು ನಿರ್ಧರಿಸಿದ್ದಾರೆ.