ವಾಷಿಂಗ್ಟನ್ : ತನ್ನ ಕಂಪ್ಯೂಟರ್ ವ್ಯವಸ್ಥೆಗಳು ಚೀನಾ ಸರಕಾರಿ ಪ್ರಾಯೋಜಿತ ಸೈಬರ್ ದಾಳಿಗೆ ಒಳಗಾಗಿವೆ ಎಂದು ಅಮೆರಿಕದ ವಿತ್ತ ಸಚಿವಾಲಯ ಸಂಸತ್ ಗೆ ಪತ್ರದ ಮೂಲಕ ತಿಳಿಸಿರುವುದಾಗಿ ವರದಿಯಾಗಿದೆ.
ಡಿಸೆಂಬರ್ ತಿಂಗಳ ಆರಂಭದಲ್ಲಿ ಈ ಸೈಬರ್ ದಾಳಿ ನಡೆದಿದೆ. ವಿತ್ತ ಸಚಿವಾಲಯಕ್ಕೆ ಸೈಬರ್ ಸೆಕ್ಯುರಿಟಿ ಸೇವೆ ಒದಗಿಸುತ್ತಿರುವ ಮೂರನೇ ಸಂಸ್ಥೆ(ಥರ್ಡ್ ಪಾರ್ಟಿ) `ಬಿಯಾಂಡ್ ಟ್ರಸ್ಟ್’ ಜತೆ ಹೊಂದಾಣಿಕೆ ಮಾಡಿಕೊಂಡ ಸೈಬರ್ ವಂಚಕರು ವಿತ್ತ ಸಚಿವಾಲಯದ ಕಚೇರಿಯ ಕಂಪ್ಯೂಟರ್ ವ್ಯವಸ್ಥೆ ಹಾಗೂ ಇತರ ಕೆಲವು ವರ್ಗೀಕರಿಸಿದ ದಾಖಲೆಗಳ ಮಾಹಿತಿ ಸಂಗ್ರಹಿಸಲು ಶಕ್ತರಾಗಿದ್ದಾರೆ ಎಂದು ವಿತ್ತ ಇಲಾಖೆಯ ವಕ್ತಾರರು ತಿಳಿಸಿದ್ದಾರೆ
ಸೈಬರ್ ದಾಳಿಯ ಮಾಹಿತಿ ತಿಳಿದೊಡನೆ ಅಮೆರಿಕದ ಸೈಬರ್ ಭದ್ರತೆ ಮತ್ತು ಮೂಲಸೌಕರ್ಯ ಭದ್ರತಾ ಏಜೆನ್ಸಿಯನ್ನು ಎಚ್ಚರಿಸಲಾಗಿದೆ. ಹೊಂದಾಣಿಕೆ ಮಾಡಿಕೊಂಡ ಬಿಯಾಂಡ್ ಟ್ರಸ್ಟ್ ಆಫ್ಲೈನ್ ಸೇವೆಯನ್ನು ಒದಗಿಸುತ್ತಿತ್ತು. ಸೈಬರ್ ವಂಚಕರು ವಿತ್ತ ಇಲಾಖೆಯ ಕಂಪ್ಯೂಟರ್ ವ್ಯವಸ್ಥೆಯ ಮಾಹಿತಿಯನ್ನು ಈಗಲೂ ಪಡೆಯುತ್ತಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೈಬರ್ ದಾಳಿಯಿಂದ ಆಗಿರುವ ಪರಿಣಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.
ಈ ಘಟನೆಯಲ್ಲಿ ಚೀನಾ ಸರಕಾರ ಪ್ರಾಯೋಜಿತ ಸೈಬರ್ ವಂಚಕರು ಭಾಗಿಯಾಗಿದ್ದಾರೆ ಎಂದು ಸಂಸತ್ ನ ಬ್ಯಾಂಕಿಂಗ್ ಸಮಿತಿಗೆ ಕಳುಹಿಸಿರುವ ಪತ್ರದಲ್ಲಿ ವಿತ್ತ ಇಲಾಖೆ ಉಲ್ಲೇಖಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.