ದೊಡ್ಮನೆಯ ಆಟ ಕೊನೆಯ ಹಂತ ತಲುಪಲು ಕೌಂಟ್ಡೌನ್ ಶುರುವಾಗಿದೆ. ಬಿಗ್ ಬಾಸ್ (Bigg Boss Kannada 10) ಆಟಕ್ಕೆ ಇನ್ನೇನು ಬ್ರೇಕ್ ಬೀಳಲು 2 ವಾರಗಳಿವೆ. ಬಿಗ್ ಬಾಸ್ ಫಿನಾಲೆಗೆ ಮೊದಲ ಫೈನಲಿಸ್ಟ್ ಆಗಿ ಸಂಗೀತಾ ಶೃಂಗೇರಿ (Sangeetha Sringeri) ಹೊರಹೊಮ್ಮಿದ್ದಾರೆ. ಇದರ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಡ್ರೋನ್ ಪ್ರತಾಪ್ (Drone Prathap) ಈ ವಾರ ಹೆಚ್ಚು ಅಂಕ ಗಳಿಸಿದ್ದರು. ಅವರು ಫಿನಾಲೆ ಫೈನಲಿಸ್ಟ್ ಆಗಬೇಕಿತ್ತು ಎಂಬ ಮಾತುಗಳಿಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಮೇಲೆ ಬಂದಿರೋ ಆರೋಪಕ್ಕೆ ಉತ್ತರ ನೀಡಿದ್ದಾರೆ. ಸಂಗೀತಾ ಮತ್ತು ಪ್ರತಾಪ್ ನಡುವಿನ ಫಿನಾಲೆ ಟಿಕೆಟ್ ವಿಚಾರದಲ್ಲಿ ಮೋಸವಾಗಿದ್ಯಾ? ಎಂಬುದಕ್ಕೆ ಉತ್ತರ ನೀಡಿದ್ದಾರೆ.
ಬಿಗ್ ಬಾಸ್, ಈ ವಾರ ಅಷ್ಟು ಟಾಸ್ಕ್ಗಳಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರಿಗೆ ಫಿನಾಲೆ ಮೊದಲ ಟಿಕೆಟ್ ಸಿಗಲಿದೆ ಎಂದು ಘೋಷಿಸಿದ್ದರು. ಅದರಂತೆ ಪ್ರತಾಪ್ 420, ಸಂಗೀತಾ 300, ನಮ್ರತಾ 210 ಅಂಕಗಳನ್ನು ಪಡೆದಿರುತ್ತಾರೆ. ಈ ಮೂವರಲ್ಲಿ ಯಾರಿಗೆ ಹೆಚ್ಚಿನ ವೋಟ್ ಸಿಗಲಿದೆ ಅವರು ಫಿನಾಲೆ ಹೋಗುತ್ತಾರೆ ಎಂದು ಬಿಗ್ ಬಾಸ್ ತಿಳಿಸಿದ್ದರು. 100 ದಿನಗಳ ಆಟ ಗಮನಿಸಿ ಮನೆಮಂದಿ ಸಂಗೀತಾಗೆ ಹೆಚ್ಚಿನ ವೋಟ್ ನೀಡಿದ್ದರು. ಹಾಗಾಗಿ ಮನೆಯ ಕ್ಯಾಪ್ಟನ್ ಪಟ್ಟದ ಜೊತೆ ಮೊದಲ ಫೈನಲಿಸ್ಟ್ ಆದರು
ಈ ಬಗ್ಗೆ ಹೊರಗಡೆ ಹಲವರು ಪ್ರಶ್ನೆ ಮಾಡಿದರು. ವೋಟಿಂಗ್ ಮೂಲಕ ಟಿಕೆಟ್ ನೀಡುವುದಾದರೆ ಟಾಸ್ಕ್ ನಡೆಸಿದ್ದು ಏಕೆ ಹೆಚ್ಚು ಮತ ಗಳಿಸಿದ ಡ್ರೋನ್ ಪ್ರತಾಪ್ಗೆ ನೇರವಾಗಿ ಟಿಕೆಟ್ ನೀಡಲಿಲ್ಲ ಏಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಶನಿವಾರದ ಎಪಿಸೋಡ್ಗೆ ಬಂದ ಸುದೀಪ್, ಇದೇ ಪ್ರಶ್ನೆಯನ್ನಿಟ್ಟುಕೊಂಡೇ ಎಪಿಸೋಡ್ಗೆ ಚಾಲನೆ ನೀಡಿದ್ದರು.
ಮೊದಲಿಗೆ ಮನೆಯ ಸದಸ್ಯರ ಅಭಿಪ್ರಾಯಗಳನ್ನು ಕೇಳಿದರು. ಆಗ ಪ್ರತಾಪ್ ಸೇರಿದಂತೆ ಎಲ್ಲರೂ ಬಿಗ್ಬಾಸ್ ನಿರ್ಣಯ ಸರಿಯಾಗಿಯೇ ಇತ್ತು ಎಂದರು. ಬಹುತೇಕರು, ಪ್ರತಾಪ್ ಇಷ್ಟು ದಿನ ಸರಿಯಾಗಿ ಆಡಲಿಲ್ಲ, ಆದರೆ ಈ ವಾರ ಮಾತ್ರವೇ ಚೆನ್ನಾಗಿ ಆಡಿದರು. ಅವರಿಗೆ ಟಿಕೆಟ್ ಕೊಟ್ಟಿದ್ದರೆ ಮೊದಲಿನಿಂದಲೂ ಚೆನ್ನಾಗಿ ಆಡಿಕೊಂಡು ಬಂದವರಿಗೆ ಅನ್ಯಾಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕೇವಲ ಒಂದು ವಾರದ ಪ್ರದರ್ಶನದಿಂದ ಫಿನಾಲೆಗೆ ಹೋಗುವುದು ನ್ಯಾಯವಲ್ಲ ಎಂದು ಇತರೆ ಸ್ಪರ್ಧಿಗಳು ತಿಳಿಸಿದ್ದರು.
ಸುದೀಪ್ ಸಹ ಮಾತನಾಡುತ್ತಾ, ಬಿಗ್ಬಾಸ್ (Bigg Boss) ಎಂಬುದು ಒಂದು ವಾರದ ಆಟವಷ್ಟೇ ಅಲ್ಲ, ಅಲ್ಲದೇ ಕೇವಲ ಆಟ ಮಾತ್ರವೇ ಅಲ್ಲ ಮನೆಯಲ್ಲಿ ಇಷ್ಟು ದಿನಗಳ ಆಟಗಾರರ ವ್ಯಕ್ತಿತ್ವವೂ ಅದಕ್ಕೆ ಸೇರಿರುತ್ತದೆ. ವೀಕ್ಷಕರ ಅಭಿಪ್ರಾಯದ ಜೊತೆಗೆ, ಮನೆಯ ಒಳಗಿರುವವರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಅದೆಲ್ಲದಕ್ಕಿಂತಲೂ ಮುಖ್ಯವಾಗಿ, ಬಿಗ್ಬಾಸ್ ಘೋಷಣೆ ಮಾಡಿದಾಗಲೇ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರು ಫಿನಾಲೆಗೆ ಟಿಕೆಟ್ ಪಡೆಯಲಿದ್ದಾರೆ ಎಂದೇ ಘೋಷಿಸಿದ್ದರು. ಮನೆಯಲ್ಲಿರುವವರಿಗೆ ಹಾಗೂ ಪ್ರೇಕ್ಷಕರಿಗೆ ಈ ಸ್ಪಷ್ಟನೆ ನನಗೆ ಕೊಡಬೇಕು ಅನ್ನಿಸುತ್ತಿದೆ ಹಾಗಾಗಿ ಕೊಡುತ್ತಿದ್ದೇನೆ ಎಂದು ಸುದೀಪ್ ಮಾತನಾಡಿದ್ದಾರೆ.