ಅರ್ಜುನ್ ರೆಡ್ಡಿ, ಅನಿಮಲ್, ಕಬೀರ್ ಸಿಂಗ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸದ್ಯ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮೈಕಲ್ ಜಾಕ್ಸನ್ ಜೀವನವನ್ನು ತೆರೆ ಮೇಲೆ ತರಲು ಆಸಕ್ತಿ ತೋರಿದ್ದಾರೆ.
ಮೂರು ಸಿನಿಮಾಗಳು ಸೂಪರ್ ಹಿಟ್ ಆದ ಬಳಿಕ ಸಂದೀಪ್ ರೆಡ್ಡಿ ವಂಗಾ ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದ್ದು, ಅವರ ಜೊತೆ ಸಿನಿಮಾ ಮಾಡಲು ಅನೇಕ ಸ್ಟಾರ್ ನಟರು ಕಾದಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂದೀಪ್ ರೆಡ್ಡಿ ವಂಗಾ ಅವರು ಒಂದು ಬಯಕೆಯನ್ನು ತೋಡಿಕೊಂಡಿದ್ದಾರೆ. ಮೈಕಲ್ ಜಾಕ್ಸನ್ ಅವರ ಜೀವನದ ಕಥೆ ಬಗ್ಗೆ ಸಂದೀಪ್ ಅವರಿಗೆ ಸಖತ್ ಆಸಕ್ತಿ ಇದೆ.
‘ಆಸೆ ಇದೆ. ಆದರೆ, ಮೈಕಲ್ ಜಾಕ್ಸನ್ ಪಾತ್ರವನ್ನು ಯಾರು ಮಾಡ್ತಾರೆ ಎಂಬುದೇ ಪ್ರಶ್ನೆ. ಸೂಕ್ತವಾದ ನಟ ಸಿಕ್ಕರೆ ಹಾಲಿವುಡ್ನಲ್ಲಿ ಸಿನಿಮಾ ಮಾಡಬಹುದು. ಮೈಕಲ್ ಜಾಕ್ಸನ್ ಅವರ ಜೀವನ ತುಂಬ ಇಂಟರೆಸ್ಟಿಂಗ್ ಆಗಿತ್ತು. ಅವರ ಬಾಲ್ಯದ ದಿನಗಳು, ಮೈ ಬಣ್ಣ ಬದಲಾಯಿಸಿಕೊಂಡಿದ್ದು.. ಅದೆಲ್ಲವೂ ಒಂದು ದೊಡ್ಡ ಜರ್ನಿ, ದೊಡ್ಡ ಕಥೆ. ಅದೊಂದು ಕನಸು. ಆ ಸಿನಿಮಾ ಮಾಡಿದರೆ ಎಲ್ಲರೂ ಟಿಕೆಟ್ ಖರೀದಿಸುತ್ತಾರೆ. ಯಾರೇ ನಿರ್ದೇಶನ ಮಾಡಿದರೂ ನಾನು ಟಿಕೆಟ್ ಖರೀಸಿದಿ ಸಿನಿಮಾ ನೋಡುತ್ತೇನೆ. ಯಾಕೆಂದ್ರೆ ನಾನು ಕೂಡ ತಿಳಿದುಕೊಳ್ಳಬೇಕು’ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.