ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿರುವುದು ಬೇಸರ ಮೂಡಿಸಿದೆ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹೇಳಿದ್ದಾರೆ. ಆದರೆ ಟೂರ್ನಿಯುದ್ದಕ್ಕೂ ತಂಡದ ಗೆಲುವಿಗೆ ನೆರವು ನೀಡಿದ್ದ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಮಾಜಿ ನಾಯಕ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಭಾನುವಾರ (ನವೆಂಬರ್ 19) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಸೋಲು ಕಂಡು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 3ನೇ ಬಾರಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿತ್ತು.
2023ರ ಏಕದಿನ ವಿಶ್ವಕಪ್ ಟೂರ್ನಿಯ ಅಂತ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟ್ರೋಫಿ ಗೆಲ್ಲದಿರುವುದು ಬೇಸರದ ಸಂಗತಿಯಾಗಿದೆ. ಈ ಇಬ್ಬರು ಆಟಗಾರರು ಟೀಮ್ ಇಂಡಿಯಾದ ಗೆಲುವಿಗಾಗಿ ಪ್ರತಿ ಕ್ಷಣವೂ ಕೈಜೋಡಿಸಿದ್ದರು. ರೋಹಿತ್ ಶರ್ಮಾ ಸ್ಫೋಟಕ ಪ್ರದರ್ಶನದಿಂದ ಆರಂಭದಲ್ಲೇ ರನ್ ವೇಗ ಹೆಚ್ಚಿಸಿದರೆ, ವಿರಾಟ್ ಕೊಹ್ಲಿ ಪಂದ್ಯದ ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು ಪಂದ್ಯವನ್ನು ಗೆಲ್ಲಿಸುತ್ತಿದ್ದರು,” ಎಂದು ಸ್ಪಿನ್ ದಿಗ್ಗಜ ಶ್ಲಾಘಿಸಿದ್ದಾರೆ.
ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಟ್ರೋಫಿ ಗೆಲ್ಲಲು ಕಠಿಣ ಕೆಲಸ ಹಾಗೂ ಸವಾಲುಗಳನ್ನು ಎದುರಿಸಿದ್ದರು. ಅವರ ಕೈಯಲ್ಲಿ ವಿಶ್ವಕಪ್ ನೋಡಲು ಸಾಕಷ್ಟು ಹಂಬಲಿಸುತ್ತಿದ್ದೆ. ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯಲ್ಲಿ ಮುಂದುವರಿಯುವುದು ಅವರಿಗೆ (ರಾಹುಲ್ ದ್ರಾವಿಡ್) ಬಿಟ್ಟ ವಿಚಾರ ಎಂದು ಮಾಜಿ ಹೆಡ್ ಕೋಚ್ ಹೇಳಿದ್ದಾರೆ.