ದೇಶದ ಪ್ರಮುಖ ಯುಪಿಐ ಪ್ಲಾಟ್ಫಾರ್ಮ್ ಫೋನ್ಪೇ ಶೀಘ್ರದಲ್ಲೇ ಸಾಲದ ಸೇವೆಯನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಜನವರಿ 2024ರಿಂದ ಈ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಇದಕ್ಕಾಗಿ, ಕಂಪನಿಯು ಸುಮಾರು 5 ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳೊಂದಿಗೆ (ಎನ್ಬಿಎಫ್ಸಿ) ಮಾತುಕತೆಗಳನ್ನು ಬಹುತೇಕ ಅಂತಿಮಗೊಳಿಸಿದೆ.
ವಾಲ್ಮಾರ್ಟ್ ಮಾಲೀಕತ್ವದ ಫೋನ್ಪೇ ವಿತರಕ ಸಂಸ್ಥೆಯಾಗಿ ಸಾಲ ವಿತರಣೆ ಮಾಡಲಿದೆ. ಇದರಿಂದ ಫೋನ್ಪೇ ಯುಪಿಐ ಅಪ್ಲಿಕೇಶನ್ ಬಳಸುವ 50 ಕೋಟಿಗೂ ಹೆಚ್ಚು ಗ್ರಾಹಕರು ಮತ್ತು 3.7 ಕೋಟಿ ಸಣ್ಣ ಮತ್ತು ದೊಡ್ಡ ಉದ್ಯಮಿಗಳಿಗೆ ಪ್ರಯೋಜನವಾಗಲಿದೆ.
ಡಿಜಿಟಲ್ ಪಾವತಿ ವಲಯದಲ್ಲಿ ಬಲವಾದ ಹಿಡಿತ ಸಾಧಿಸಿರುವ ಫೋನ್ಪೇ ಈಗ ಹೊಸ ಹೊಸ ವಲಯಗಳನ್ನು ಪ್ರವೇಶಿಸಲು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಐದು ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಫೋನ್ಪೇ ಪ್ಲಾಟ್ಫಾರ್ಮ್ಗೆ ಬರಲು ಒಪ್ಪಿಕೊಂಡಿವೆ. ಶೀಘ್ರದಲ್ಲೇ ಕಂಪನಿಯು ಈ ಬಗ್ಗೆ ಘೋಷಣೆ ಮಾಡಲಿದೆ.
ಸುಮಾರು 6 ತಿಂಗಳಲ್ಲಿ ಫೋನ್ಪೇನಲ್ಲಿ ಜನರಿಗೆ ಹಲವು ರೀತಿಯ ಉತ್ಪನ್ನಗಳು ಲಭ್ಯವಾಗಲಿವೆ. ಪ್ರಸ್ತುತ ಕಂಪನಿಯು ತನ್ನ ಗ್ರಾಹಕರ ಡೇಟಾಬೇಸ್ನಿಂದ ವಿವಿಧ ರೀತಿಯ ಸಾಲಗಳಿಗೆ ಅರ್ಹರಾಗಿರುವ ಜನರನ್ನು ಹುಡುಕುತ್ತಿದೆ. ಕ್ರಮೇಣ ಕಂಪನಿಯು ಅವರಿಗೆ ಕೊಡುಗೆಗಳ ಸಂಬಂಧ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸುತ್ತದೆ.
ಫೋನ್ಪೇ ಪ್ಲಾಟ್ಫಾರ್ಮ್ನಲ್ಲಿ ಸುಮಾರು 3.7 ಕೋಟಿ ವ್ಯಾಪಾರಿಗಳಿದ್ದಾರೆ. ಇತ್ತೀಚೆಗೆ ಕಂಪನಿಯು ಕ್ರೆಡಿಟ್ ಕಾರ್ಡ್ ಸೇವೆಯನ್ನು ಪ್ರಾರಂಭಿಸಲು ಆಕ್ಸಿಸ್ ಬ್ಯಾಂಕ್ನೊಂದಿಗೆ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಈ ಸೇವೆಯೂ ಆರಂಭವಾಗಲಿದೆ. ಕಂಪನಿಯು ಮುಂಬರುವ ಕೆಲವು ವರ್ಷಗಳಲ್ಲಿ ಕ್ರೆಡಿಟ್ ಲೈನ್ ಅನ್ನು ನೀಡಲು ಯೋಜಿಸುತ್ತಿದೆ.