ಮಂಡ್ಯ:- ಗೋಲ್ಡ್ ಲೋನ್ ಹೆಸರಿನಲ್ಲಿ ವಂಚನೆ ಮಾಡುವ ದಂಧೆ ಶುರುವಾಗಿದ್ದು, ಅಮಾಯಕರನ್ನೇ ಗುರಿಯಾಗಿಸಿ ಮಾಡಿ ಮೋಸದ ಜಾಲಕ್ಕೆ ಕೆಡವಲಾಗುತ್ತಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಚಿನ್ನಾವರಣ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಸಕ್ರಿಯವಾಗಿದ್ದು, ಖಾಸಗಿ ಸಂಸ್ಥೆಯೊಂದರ ಮೋಸದ ಜಾಲಕ್ಕೆ ಸಿದ್ದಲಿಂಗಸ್ವಾಮಿ ಎಂಬುವರು ಸಿಲುಕಿ ಚಿನ್ನ ಕಳೆದುಕೊಂಡಿದ್ದಾರೆ. ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆರ್ಥಿಕವಾಗಿ ಸಮಸ್ಯೆ ಎದುರಾಗಿದ್ದರಿಂದ ಸಿದ್ದಲಿಂಗಸ್ವಾಮಿ ತಮ್ಮ ಪತ್ನಿಯ 54 ಗ್ರಾಂ ಚಿನ್ನಾಭರಣಗಳನ್ನು 1.65 ಲಕ್ಷ ರೂ.ಗೆ ಕೆನರಾಬ್ಯಾಂಕ್ನಲ್ಲಿ ಅಡವಿಟ್ಟಿದ್ದರು. ಇದಾದ ಕೆಲವು ತಿಂಗಳ ಬಳಿಕ ಸಿದ್ದಲಿಂಗಸ್ವಾಮಿಗೆ ‘ಅನಘಾ ಗೋಲ್ಡ್’ ಕಂಪನಿಯ ಸಿಬ್ಬಂದಿ ಫೋನ್ ಮಾಡಿ, ‘ನಿಮ್ಮ ಚಿನ್ನಾಭರಣಗಳನ್ನು ನಾವೇ ಬಿಡಿಸಿ, ಕಡಿಮೆ ಬಡ್ಡಿಗೆ ಅಡವಿಟ್ಟಿಕೊಳ್ಳುತ್ತೇವೆ. ಅಷ್ಟೇ ಅಲ್ಲ 6 ತಿಂಗಳು ಬಡ್ಡಿ ಇರುವುದಿಲ್ಲ’ ಎಂದು ಆಮಿಷ ತೋರಿದ್ದಾರೆ. ಕಡಿಮೆ ಬಡ್ಡಿ ಜೊತೆಗೆ 6 ತಿಂಗಳು ಬಡ್ಡಿ ಹಣ ಉಳಿದುಕೊಳ್ಳುತ್ತಲ್ಲ ಎಂದು ಕೆನರಾ ಬ್ಯಾಂಕ್ನಿಂದ ಒಡವೆ ಬಿಡಿಸಿ ಅನಘಾ ಗೋಲ್ಡ್ ಕಂಪನಿಯಲ್ಲಿ ಅಡ ಇಟ್ಟಿದ್ದಾರೆ.
6 ತಿಂಗಳ ಬಳಿಕ ಚಿನ್ನ ಬಿಡಿಸಿಕೊಳ್ಳಲು ಹೋದರೆ, ಹದಿನೈದು ದಿನ ಬಿಟ್ಟು ಬನ್ನಿ, ಮುಂದಿನ ತಿಂಗಳು ಕೊಡುತ್ತೇವೆ, ಇವತ್ತು ಮ್ಯಾನೇಜರ್ ಇಲ್ಲ ಎಂದು ಒಂದೊಂದದೇ ಸಬೂಬು ಹೇಳಿಕೊಂಡು ಸಾಗ ಹಾಕಿದ್ದರು. ಕೊನೆಗೆ ರೋಸಿಹೋದ ಸಿದ್ದಲಿಂಗಸ್ವಾಮಿ, ನ್ಯಾಯಕೊಡಿಸುವಂತೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
ಮಳವಳ್ಳಿ ಮಾತ್ರವಲ್ಲದೆ ಮಂಡ್ಯ ಜಿಲ್ಲೆ ಹಾಗೂ ಮೈಸೂರು ಭಾಗದಲ್ಲಿ ಹತ್ತಾರು ಕಂಪನಿಗಳು ಗೋಲ್ಡ್ ಲೋನ್ ಹೆಸರಿನಲ್ಲಿ ವಂಚನೆ ಮಾಡುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೋರಾಟಗಾರ ಶ್ರೀನಿವಾಸ್ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.