ವಿಶ್ವದ ಯಾವ ಪಿಚ್ ನಲ್ಲಿ ಬೇಕಾದರೂ ಯಾವ ತಂಡವನ್ನು ಬೇಕಾದರೂ ಸೋಲಿಸಬಲ್ಲಷ್ಟು ಬಲಿಷ್ಠವಾಗಿ ಬೆಳೆಯತೊಡಗಿತು. ಈ ಯಶಸ್ಸಿನ ಹಿಂದೆ ನಿಂತು ಕೆಲಸ ಮಾಡಿದವರು ಅಂದಿನ ಕೋಚ್ ಜಾನ್ ರೈಟ್ ಎಂದು ಬೇರೆ ಬೇಕಿಲ್ಲ. ತಂಡದ ಭಾಗವಾಗಿದ್ದ ವಿವಿಎಸ್ ಲಕ್ಷ್ಮಣ್ ಇದೀಗ ಆ ಯಶಸ್ಸಿನ ಒಂದು ರಹಸ್ಯವನ್ನು ಬಹಿರಂಗಗೊಳಿಸಿದ್ದಾರೆ.
ಹಾಗಾದರೆ ಭಾರತದ ವಿಕೆಟ್ ಗಳು ಪಟಪಟನೆ ಉದುರುತ್ತಿದ್ದ ಸಂದರ್ಭದಲ್ಲೂ ವಿವಿಎಸ್ ಲಕ್ಷ್ಮಣ್ ಬಾಲಂಗೋಚಿಗಳ ಜೊತೆ ಸೇರಿ ತಂಡವನ್ನು ದಡ ಸೇರಿಸುತ್ತಿದ್ದುದ್ದು ಹೇಗೆ? ಸಾಮಾನ್ಯವಾಗಿ ಬ್ಯಾಟರ್ ಗಳು ಪೆವಿಲಿಯನ್ ಸೇರಿ ತಜ್ಞ ಬ್ಯಾಟರ್ ಒಬ್ಬಂಟಿಯಾದರೆ ಎದುರಾಳಿ ಬೌಲರ್ ಗಳಿಗೆ ಒಂದು ತುದಿಯಿಂದ ವಿಕೆಟ್ ಕಬಳಿಸುವುದೆಂದರೆ ನೀರು ಕುಡಿದಷ್ಟೇ ಸುಲಭ.
ಸೌರವ್ ಗಂಗೂಲಿ ನೇತೃತ್ವದಲ್ಲಿ ಹಲವು ಪಂದ್ಯಗಳನ್ನು ಭಾರತ ತಂಡ ಬಾಲಂಗೋಚಿಗಳ ನೆರವಿನಿಂದಲೇ ಗೆದ್ದು ಬೀಗಿತ್ತು. ಇದಕ್ಕೆ ಕಾರಣವಾಗಿದ್ದು ಜಾನ್ ರೈಟ್ ತಜ್ಞ ಬ್ಯಾಟರ್ ಗಳಿಗೆ ನೀಡಿದ್ದ ಹೆಚ್ಚುವರಿ ಜವಾಬ್ದಾರಿ. ಹೌದು! ಜಾನ್ ರೈಟ್ ತಂಡದ ತಜ್ಞ ಮತ್ತು ಅನುಭವಿ ಬ್ಯಾಟರ್ ಗಳಿಗೆ ಬೌಲರ್ ಗಳನ್ನು ಬ್ಯಾಟಿಂಗ್ ನಲ್ಲಿ ತಯಾರು ಮಾಡುವ ಜನಾಬ್ದಾರಿ ನೀಡಿದ್ದರಂತೆ. ಅದಕ್ಕನುಸಾರವಾಗಿ ಬ್ಯಾಟರ್ ಗಳು ಒಬ್ಬರು ಅಥವಾ ಇಬ್ಬರು ಬೌಲರ್ ಗಳನ್ನು ಬ್ಯಾಟಿಂಗ್ ನಲ್ಲಿ ತಯಾರು ಮಾಡಬೇಕಿತ್ತು !ನಿಜಕ್ಕೂ ಇದೊಂದು ಅದ್ಭುತ ಐಡಿಯಾ ಆಗಿತ್ತು. ಜೊತೆಗೆ ಇದರ ಪರಿಣಾಮ ಪಂದ್ಯದ ಗೆಲುವಿನ ಮೇಲಾಯಿತು ಎಂದು ಲಕ್ಷ್ಮಣ್ ತಿಳಿಸಿದ್ದಾರೆ. ಪಂದ್ಯದ ಸೆಶನ್ ಗಳು ಮುಗಿದ ಬಳಿಕ ಬ್ಯಾಟರ್ ಗಳು ತಮಗೆ ನಿಗದಿಪಡಿಸಿದ ಬೌಲರ್ ಗಳ ಜೊತೆ ಚರ್ಚೆಗಳನ್ನು ನಡೆಸುತ್ತಿದ್ದರು. ಬ್ಯಾಟಿಂಗ್ ನ ತಂತ್ರಗಾರಿಕೆಗಳ ಬಗ್ಗೆ ಟಿಪ್ಸ್ ಗಳನ್ನು ನೀಡುತ್ತಿದ್ದರು. ಇದರಿಂದಾಗಿ ಬೀಡು ಬೀಸಾಗಿ ಬ್ಯಾಟ್ ಬೀಸುತ್ತಿದ್ದ ಬೌಲರುಗಳು ವಿಕೆಟ್ ಒಪ್ಪಿಸದೆ ಕ್ರೀಸ್ ಗೆ ಅಂಟಿಕೊಳ್ಳುವುದನ್ನು ಕರಗತ ಮಾಡಿಕೊಂಡರು.
ಇದು ಪಂದ್ಯದ ವೇಳೆ ವಿಕೆಟ್ ಗಳು ಬಿದ್ದಾಗ ಚೇತರಿಸಿಕೊಳ್ಳುವುದಕ್ಕೆ ಸಹಾಯವಾಯಿತು. ಬೌಲರ್ ಗಳು ಒಂದು ಬದಿಯಿಂದ ವಿಕೆಟ್ ಗೆ ಅಂಟಿಕೊಂಡು ನಿಲ್ಲುವುದರಿಂದ ತಜ್ಞ ಬ್ಯಾಟರ್ ಗಳಿಗೆ ರನ್ ಪೇರಿಸಲು ಅನುಕೂಲವಾಯಿತು. ಟೀಂ ಇಂಡಿಯಾ ನಾಲ್ಕನೇ ಇನ್ನಿಂಗ್ಸ್ ಬೆಂಬತ್ತುವ ವೇಳೆ ನೆನಪಿನಲ್ಲಿ ಉಳಿಯುವ ಪ್ರದರ್ಶನ ನೀಡಲು ಈ ಪ್ರಯೋಗವೇ ಕಾರಣ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.