ಟಾಲಿವುಡ್ ನಟ ವಿಶ್ವಕ್ ಸೇನ್ ಅವರು ಸಿನಿಮಾವೊಂದರ ಶೂಟಿಂಗ್ ವೇಳೆ ಸೆಟ್ನಲ್ಲಿ ಲಾರಿಯಿಂದ ಕೆಳಗೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸದ್ಯ ವಿಶ್ವಕ್ ಸೇನ್ ಅವರು ‘ಗ್ಯಾಂಗ್ಸ್ ಆಫ್ ಗೋದಾವರಿ ಆ್ಯಕ್ಷನ್ ಭರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿಯೇ ಲಾರಿ ಬಳಸಿ ಆ್ಯಕ್ಷನ್ ದೃಶ್ಯವನ್ನ ಚಿತ್ರೀಕರಿಸಲು ಯೋಜನೆ ಮಾಡಲಾಗಿತ್ತು. ವಿಶ್ವಕ್ ಲಾರಿ ಮೇಲೆ ನಿಂತು ಮಾಡುವ ಸ್ಟಂಟ್ ಶೂಟಿಂಗ್ ವೇಳೆ ಈ ಅವಘಡ ನಡೆದಿದೆ. ಈ ದೃಶ್ಯಕ್ಕೆ ತಾಲೀಮು ಮಾಡುವ ಸಂದರ್ಭದಲ್ಲಿ ಲಾರಿ ಮೇಲಿಂದ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ವಿಶ್ವಕ್ ಸೇನ್ ಸುದ್ದಿ ವೈರಲ್ ಆಗ್ತಿದ್ದಂತೆ ನಿರ್ಮಾಣ ಸಂಸ್ಥೆ ಈ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವಕ್ ಚಿತ್ರೀಕರಣ ಸಮಯದಲ್ಲಿ ಪೆಟ್ಟಾಗಿದ್ದು ನಿಜ. ಆದರೆ ಇದಾಗಿ ಕೆಲವು ದಿನಗಳಾಗಿವೆ. ಸೂಕ್ತ ಚಿಕಿತ್ಸೆ ಬಳಿಕ ಅವರು ಇದೀಗ ಗುಣಮುಖರಾಗಿದ್ದಾರೆ. ಮತ್ತೆ ಚಿತ್ರೀಕರಣಕ್ಕೆ ಅವರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.
‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಇದೇ ಡಿಸೆಂಬರ್ 10ರಂದು ರಿಲೀಸ್ ಆಗುತ್ತಿದೆ. ವಿಶ್ವಕ್ಗೆ ನಾಯಕಿಯಾಗಿ ಕನ್ನಡದ ನಟಿ ನೇಹಾ ಶೆಟ್ಟಿ ನಟಿಸಿದ್ದಾರೆ.