ವಿಜಯನಗರ : ವಿಜಯನಗರದಲ್ಲಿ ಹಂಪಿ ಉತ್ಸವ ವಿಜೃಂಭಣೆಯಿಂದ ಆರಂಭಗೊಂಡಿದೆ. ವಿರೂಪಾಕ್ಷೇಶ್ವರ ದೇವಸ್ಥಾನ ರಥ ಬೀದಿಯಲ್ಲಿ ಮೂಡಿದ ರಂಗೋಲಿ ಚಿತ್ತಾರವಂತೂ ಕಣ್ಣಿಗೆ ಹಬ್ಬದಂತಿತ್ತು. ಹೊಸಪೇಟೆ ಹಂಪಿ ಉತ್ಸವದ ಅಂಗವಾಗಿ ಶುಕ್ರವಾರ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಏರ್ಪಡಿಸಿದ ರಂಗೋಲಿ ಸ್ಪರ್ಧೆಯಲ್ಲಿ ಬಗೆ ಬಗೆಯ ರಂಗೋಲಿ ಚಿತ್ತಾರಗಳು ಮೂಡಿದವು. ಮಹಿಳೆ ಹಾಗೂ ಪುರಷರ ಅಭ್ಯರ್ಥಿಗಳು ಸೇರಿ ಒಟ್ಟು 47 ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾದ ರಂಗೋಲಿ ಸ್ಪರ್ಧೆಗೆ ಜಿಲ್ಲಾ ಪಂಚಾಯತ್ ಉಪನಿರ್ದೇಶಕ ಭೀಮಪ್ಪ ಲಾಳಿ ಚಾಲನೆ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ರಂಗೋಲಿಯ ಚಿತ್ತಾರದಲ್ಲಿ ಶಿವಲಿಂಗ, ಕೃಷ್ಣ, ಎಲ್ಲಮ್ಮ ದೇವಿ, ಕಮಲ ಹೂಗಳು, ಮಹಿಳೆ ಮತ್ತು ನವಿಲು ಸೇರಿದಂತೆ ಬಗೆ-ಬಗೆಯ ಚಿತ್ತಾರಗಳ ಮೂಡಿದವು. ಸ್ವಾತಿ ಶಶಿಕಾಂತ ಬಿಡಿಸಿದ ರಂಗೋಲಿ ಪ್ರಥಮ ಸ್ಥಾನ ಪಡೆಯಿತು. ಶೃತಿಯವರ ರಂಗೋಲಿ ದ್ವಿತೀಯ ಹಾಗೂ ವೆಂಕಟೇಶ್ ಬಿಡಿಸಿದ ರಂಗೋಲಿ ತೃತೀಯ ಸ್ಥಾನ ಗಳಿಸಿತು.
ರಂಗವಲ್ಲಿಗೆ ಮನಸೋತ ವಿದೇಶಿಗರು
ಬಣ್ಣ ಬಣ್ಣದ ರಂಗೋಲಿಗಳು ಹಂಪಿ ವೀಕ್ಷಣೆಗೆ ಆಗಮಿಸಿದ ವಿದೇಶಿಗರು ಹಾಗೂ ಸಾರ್ವಜನಿಕರ ಗಮನವನ್ನು ಸೆಳೆದವು. ರಂಗವಲ್ಲಿಗೆ ಮನಸೋತ ವಿದೇಶಿಗರು ಪೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ, ಪಿಡಿಓ ಗಂಗಾಧರ ಚಿತ್ತಾಕರ್ಷಕ ರಂಗೋಲಿಗಳನ್ನು ವೀಕ್ಷಿಸಿದರು. ಈ ವೇಳೆ ಸ್ಪರ್ಧೆಯ ತಿರ್ಪುಗಾರರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.