ಬೆಂಗಳೂರು: ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು ತಮ್ಮ 38ನೇ ವಯಸ್ಸಿನವರೆಗೂ ಉತ್ತಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲಿದ್ದು, 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಭವಿಷ್ಯ ನುಡಿದಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ 11 ಪಂದ್ಯಗಳಿಂದ 95.62ರ ಸರಾಸರಿಯಲ್ಲಿ ಕೊಹ್ಲಿ 765 ರನ್ ಬಾರಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.
2027ರ ಏಕದಿನ ವಿಶ್ವಕಪ್ ಟೂರ್ನಿಯು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿದ್ದು, ಆ ವೇಳೆಗೆ ವಿರಾಟ್ ಕೊಹ್ಲಿಗೆ 39 ವರ್ಷ ಆಗಿರುತ್ತದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಾನು ಹೆಚ್ಚು ದಿನ ಟಿ20 ಪಂದ್ಯ ಆಡುವುದಿಲ್ಲ ಎಂದು ಬಿಸಿಸಿಐಗೆ ಹೇಳಿದ್ದಾರೆ. ಆದರೆ ವಿರಾಟ್ ಕೊಹ್ಲಿ ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ.
ವಿರಾಟ್ ಕೊಹ್ಲಿ ಅವರು ತಮ್ಮ ಫಿಟ್ನೆಸ್ ಬಗ್ಗೆ ತೋರುತ್ತಿರುವ ಕಾಳಜಿ ಹಾಗೂ ಆಟದ ಬಗೆಗಿನ ಬದ್ಧತೆಯನ್ನು ಗಮನಿಸುತ್ತಿದ್ದರೆ ಅವರು ಮುಂದಿನ 4 ವರ್ಷಗಳವರೆಗೆ ಆಡುವುದಿಲ್ಲ ಎಂದು ಹೇಳಲು ಯಾವುದೇ ಕಾರಣಗಳು ಗೋಚರಿಸುತ್ತಿಲ್ಲ. ಅವರ ಫಿಟ್ನೆಸ್ ಹಾಗೂ ಆಟದ ಸೂಕ್ಷ್ಮತೆ ಅನ್ನು ಗಮನಿಸಿದರೆ ಅವರು ತಮ್ಮ 38ನೇ ವರ್ಷದವರೆಗೂ ಖಂಡಿತವಾಗಿಯೂ ಕ್ರಿಕೆಟ್ ಆಡುತ್ತಾರೆ,” ಎಂದು ಸಲ್ಮಾನ್ ಬಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ