ಭಾರತ ನೂತನ ವರ್ಷಕ್ಕೆ ಕಾಲಿಟ್ಟಿದ್ದು, ಎಲ್ಲೆಲ್ಲೂ ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ಈ ವರ್ಷ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಕಿಂಗ್ ಕೊಹ್ಲಿ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ. ಆದರೆ ಇದೇ ವರ್ಷ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನೂ ಸಹ ನೀಡಿದ್ದಾರೆ.
ವಿರಾಟ್ ಕೊಹ್ಲಿ ಈ ವರ್ಷ ಒಟ್ಟು 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 32 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಕೊಹ್ಲಿಯ ಬ್ಯಾಟ್ನಿಂದ ಮೂಡಿಬಂದ ಶತಕಗಳ ಸಂಖ್ಯೆ ಕೇವಲ 1. ಇನ್ನು ಐವತ್ತರ ಗಡಿದಾಟಿದ್ದು ಕೇವಲ 2 ಬಾರಿ ಮಾತ್ರ ಎಂದರೆ ನಂಬಲೇಬೇಕು.
ಈ ವರ್ಷ 10 ಟೆಸ್ಟ್ ಪಂದ್ಯಗಳಲ್ಲಿ 19 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 673 ಎಸೆತಗಳಲ್ಲಿ 417 ರನ್ ಕಲೆಹಾಕಿದ್ದಾರೆ. ಅದು ಕೂಡ ಕೇವಲ 24.52 ರ ಸರಾಸರಿಯಲ್ಲಿ. ಈ ವೇಳೆ ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಬಾರಿಸಲಷ್ಟೇ ಶಕ್ತರಾಗಿದ್ದಾರೆ.
2024ರಲ್ಲಿ ವಿರಾಟ್ ಕೊಹ್ಲಿ ಕೇವಲ 3 ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 58 ರನ್ಗಳು. ಅಂದರೆ 19.33 ರ ಅವರೇಜ್ನಲ್ಲಿ ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಈ ಮೂರು ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಸಹ ಬಾರಿಸಿಲ್ಲ.
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಈ ವರ್ಷ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 9 ಪಂದ್ಯಗಳಲ್ಲೂ ಅಟ್ಟರ್ ಫ್ಲಾಪ್ ಆಗಿದ್ದರು. ಆದರೆ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ 76 ರನ್ ಬಾರಿಸಿ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.