ಬೆಂಗಳೂರು: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಶತಕದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿಗೆ (Virat Kohli) ಹೆಚ್ಚಿನ ಗೌರವ ಬೆಂಗಳೂರಿಗರು (Bengaluru) ನೀಡಬೇಕು. ಆರ್ಸಿಬಿಯ (RCB) ತಂಡದಲ್ಲೇ ಇರುವ ಕೊಹ್ಲಿಗೆ ಇನ್ನಷ್ಟು ಗೌರವವನ್ನು ನಮ್ಮ ಬಿಬಿಎಂಪಿ (BBMP), ಸರ್ಕಾರ ನೀಡಬೇಕು ಎಂದು ಪಾಲಿಕೆಗೆ ಮನವಿ ಬಂದಿದೆ.
ವಿಶ್ವದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದೆ ತಡ, ಅವರ ಹೆಸರನ್ನು ಬೆಂಗಳೂರಿನ ಕೆಲ ರಸ್ತೆಗಳಿಗೆ ಇಡಬೇಕು ಎನ್ನುವ ಒತ್ತಾಯ ಮತ್ತೆ ಮುನ್ನೆಲೆಗೆ ಬಂದಿದೆ. ವಿರಾಟ್ ಕೊಹ್ಲಿ ಹಾಗೂ ನಮ್ಮ ಹೆಮ್ಮೆಯ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ (Dr.Puneeth Rajkumar) ಹೆಸರಿಡಲು ಪಾಲಿಕೆಗೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈ ಇಬ್ಬರ ಹೆಸರನ್ನು ಎರಡು ಪ್ರತ್ಯೇಕ ರಸ್ತೆಗಳಿಗೆ ಇರಿಸುವ ಮೂಲಕ ಅಭಿಮಾನಿಗಳ ಆಶಯ ಈಡೇರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು
ಶಾಂತಿನಗರ ಬಸ್ ಟರ್ಮಿನಲ್ ಎದುರಿನ ರಸ್ತೆಗೆ ಡಾ. ಪುನೀತ್ ರಾಜ್ಕುಮಾರ್ ಅವರ ಹೆಸರು ಹಾಗೂ ವಿಲ್ಸನ್ ಗಾರ್ಡನ್ನ 8ನೇ ಅಡ್ಡರಸ್ತೆಗೆ ವಿರಾಟ್ ಕೊಹ್ಲಿ ಹೆಸರು ಇಡಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಸರ್ಕಾರದ ಜೊತೆಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ಆದರೆ ರಸ್ತೆಗಳಿಗೆ ಈವರೆಗೆ ಯಾವುದೇ ಅಧಿಕೃತ ಹೆಸರು ಇರಿಸಿಲ್ಲ. ದಯವಿಟ್ಟು ಈ ಇಬ್ಬರು ಸಾಧಕರ ಹೆಸರು ಇಟ್ಟರೇ ಸೂಕ್ತ ಎನ್ನುವ ಮನವಿ ಮಾಡಲಾಗಿತ್ತು. ಆದರೆ ಈ ಬಗ್ಗೆ ಯಾಕೋ ನಿರಾಸಕ್ತಿ ತೋರುತ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಮರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ