ಬೆಂಗಳೂರು:- ಬೆಳಗಾವಿ ಘಟನೆ ಬಳಸಿ ರಾಜಕೀಯ ಮಾಡುತ್ತಿರುವ ನಡ್ಡಾ ಅವರದ್ದು ಕೀಳು ಮನಸ್ಥಿತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬೆಳಗಾವಿಯಲ್ಲಿ ಮಹಿಳೆ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಅತ್ಯಂತ ಖಂಡನೀಯ. ಮನುಷ್ಯರೆಲ್ಲರೂ ತಲೆತಗ್ಗಿಸುವಂತಹ ಆ ಘಟನೆಯನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವ ಜೆ.ಪಿ.ನಡ್ಡಾ ಅವರ ಕೀಳು ಮನಸ್ಥಿತಿ ಇನ್ನೂ ಖಂಡನೀಯ ಎಂದಿದ್ದಾರೆ.
ಬೆಳಗಾವಿಯ ಘಟನೆ ಗೊತ್ತಾದ ಕ್ಷಣವೇ ನಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತ್ರಸ್ತೆಯ ಮನೆಗೆ ಭೇಟಿ ಕೊಟ್ಟು ಸಾಂತ್ವನ ನೀಡಿದ್ದು ಮಾತ್ರವಲ್ಲ ಪರಿಹಾರವನ್ನೂ ನೀಡಿದ್ದಾರೆ. ಪೊಲೀಸರು ಇಪ್ಪತ್ತನಾಲ್ಕು ಗಂಟೆಗೊಳಗೆ ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಿದ್ದಾರೆ. ನಾನೇ ಖುದ್ದಾಗಿ ಈ ಪ್ರಕರಣದ ತನಿಖೆಯ ಮೇಲೆ ನಿಗಾ ಇಟ್ಟಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಮಾನುಷ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡ ಕ್ರಮದಿಂದ ರಾಜ್ಯದ ಬಿಜೆಪಿ ನಾಯಕರಿಗೂ ಸಮಾಧಾನವಾಗಿದೆ. ಹೀಗಿರುವಾಗ ಘಟನೆ ನಡೆದು ನಾಲ್ಕು ದಿನಗಳ ನಂತರ ಇದ್ದಕ್ಕಿದ್ದ ಹಾಗೆ ಜೆ.ಪಿ.ನಡ್ಡಾ ಅವರು ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಕೆದಕಲು ಹೊರಟಿರುವುದಕ್ಕೆ ರಾಜಕೀಯ ದುರುದ್ದೇಶ ಕಾರಣವೇ ಹೊರತು ಮಹಿಳೆಯರ ಮೇಲಿನ ಕಾಳಜಿ ಖಂಡಿತ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.