ಹಿರಿಯ ನಟಿ ಲೀಲಾವತಿ (Leelavati) ಅವರ ನಿಧನ ಹಿನ್ನೆಲೆ ಇಂದು ಪುತ್ರ ವಿನೋದ್ರಾಜ್ (Vinod Raj) ಅವರು ಕಾವೇರಿ ನದಿಯಲ್ಲಿ ತಾಯಿಗೆ ಪಿಂಡಪ್ರದಾನ ಮಾಡಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಪಶ್ಚಿಮ ವಾಹಿನಿಯಲ್ಲಿ ವೈದಿಕ ಲಕ್ಷ್ಮೀಶ್ ಶರ್ಮ ಅವರ ನೇತೃತ್ವದಲ್ಲಿ ಲೀಲಾವತಿ ಅವರಿಗೆ ಪಿಂಡಪ್ರದಾನ (Pindapradana) ಮಾಡಲಾಯಿತು.
ಮೊದಲಿಗೆ ವಿನೋದ್ರಾಜ್ ಅವರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಬಳಿಕ ಪಿಂಡಪ್ರದಾನದ ಪೂಜಾ ವಿಧಿವಿಧಾನಗಳನ್ನು ನೇರವೇರಿಸಿದರು. ಈ ವೇಳೆ ಕುಟುಂಬಸ್ಥರು ಹಾಗೂ ಲೀಲಾವತಿ ಅವರು ಪ್ರೀತಿಯಿಯಿಂದ ಸಾಕಿದ್ದ ಎರಡು ನಾಯಿಗಳು ಸಹ ಇದ್ದವು. ಎರಡು ನಾಯಿಗಳನ್ನೂ ಈ ಸಂದರ್ಭದಲ್ಲಿ ಕರೆತಂದಿದ್ದರು ವಿನೋದ್ ರಾಜ್.
ಪಿಂಡಪ್ರದಾನ ಬಳಿಕ ಮಾತನಾಡಿದ ವಿನೋದ್ರಾಜ್, ನಮ್ಮ ತಾಯಿ ಅವರಿಗೆ ಹಳ್ಳಿ ಜೀವನ ಅಂದ್ರೆ ಇಷ್ಟ. ಅದಕ್ಕಾಗಿ ನಾವು ತೋಟದ ಮನೆಯಲ್ಲಿ ವಾಸವಿದ್ದವು. ಪ್ರಾಣಿ-ಪಕ್ಷಿಗಳನ್ನು ಕಂಡರೆ ಬಹಳ ಪ್ರೀತಿ ಮಾಡ್ತಾ ಇದ್ದರು. ಮನೆಗೆ ಯಾರು ಬಂದರು ಹಸಿದು ಕಳಿಸುತ್ತಿರಲಿಲ್ಲ, ಎಲ್ಲರಿಗೂ ಊಟ ಹಾಕಿ ಕಳಿಸುತ್ತಾ ಇದ್ರು. ಇಂದು ನಮ್ಮ ತಾಯಿಗೆ ಕಾವೇರಿ ನದಿಯಲ್ಲಿ ಪಿಂಡಪ್ರದಾನ ಮಾಡಿದ್ದೇನೆ, ಪಕ್ಷಿಗಳ ರೂಪದಲ್ಲಿ ಇದನ್ನು ನಮ್ಮ ತಾಯಿಯೇ ತಿಂದಿದ್ದಾರೆ ಎಂದು ಭಾವಿಸಿದ್ದೇನೆ. ಯಾವಾಗಲೂ ನಮ್ಮ ತಾಯಿ ನಮ್ಮೊಟ್ಟಿಗೆ ಇರುತ್ತಾರೆ ಎಂದು ನಂಬಿದ್ದೇನೆ ಎಂದರು.