ಧಾರವಾಡ: ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಸರ್ವೆ ನಂಬರ್ 126ರಲ್ಲಿ ಬರುವ 84 ಎಕರೆ 22 ಗುಂಟೆ ಸರ್ಕಾರಿ ಗೋಮಾಳ ಜಮೀನನ್ನು ಕೆಲವರು ಮುಫತ್ ಗಾಯರಾಣಾ ಎಂದು ಅತಿಕ್ರಮಣ ಮಾಡಿದ್ದು, ಆ ಅತಿಕ್ರಮಣ ತೆರವುಗೊಳಿಸುವಂತೆ ಒತ್ತಾಯಿಸಿ ಸೂರಶೆಟ್ಟಿಕೊಪ್ಪದ ಗ್ರಾಮಸ್ಥರು ಟ್ರ್ಯಾಕ್ಟರ್ ಹಾಗೂ ಭಜನೆ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು.
Salman Khan: ನನ್ನ ಕೊಲ್ಲಲು ಆ ಗ್ಯಾಂಗ್ ಯತ್ನಿಸುತ್ತಿದೆ; ನಟ ಸಲ್ಮಾನ್ ಖಾನ್ ಹೇಳಿದ್ದು ಯಾರ ಬಗ್ಗೆ!?
ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ಬಂದ ಗ್ರಾಮಸ್ಥರು, ಸರ್ಕಾರಿ ಗೋಮಾಳ ಜಮೀನನ್ನು ಗ್ರಾಮದ ರೈತರಿಗೆ ಜಾನುವಾರುಗಳನ್ನು ಮೇಯಿಸಲು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಮಹಿಳೆಯರು, ವಯೋವೃದ್ಧರು ಕೂಡ ಪಾಲ್ಗೊಂಡು ಒತ್ತುವರಿಯಾಗಿರುವ ಸರ್ಕಾರಿ ಗೋಮಾಳ ಜಮೀನನ್ನು ತೆರವು ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು. ಮಳೆ ಬರುತ್ತಿದ್ದರೂ ಛತ್ರಿ ಹಿಡಿದುಕೊಂಡೇ ಜಿಲ್ಲಾಧಿಕಾರಿ ಕಚೇರಿ ಎದುರು ಪಟ್ಟು ಬಿಡದೇ ಪ್ರತಿಭಟನೆ ನಡೆಸಿದರು. ಇವರ ಮನವಿ ಪಡೆಯಲು ಬಂದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗುರುವಾರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರವೇ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂಪಡೆದು ವಾಪಸ್ ತಮ್ಮೂರಿಗೆ ತೆರಳಿದರು.
ಸರ್ಕಾರದ ಹೆಸರಲ್ಲಿರುವ 84 ಎಕರೆ 22 ಗುಂಟೆ ಜಮೀನನ್ನು ಅಕ್ರಮವಾಗಿ ಕೆಲವರು ಉಳುಮೆ ಮಾಡುತ್ತಿದ್ದಾರೆ. ಸೂರಶೆಟ್ಟಿಕೊಪ್ಪ ಗ್ರಾಮದ ರೈತರು ಹಾಗೂ ಹೆಣ್ಣು ಮಕ್ಕಳು ಅದೇ ಜಾಗದಲ್ಲಿ ಜಾನುವಾರು ಮೇಯಿಸು ಹೈನುಗಾರಿಕೆ ಮಾಡುತ್ತಿದ್ದರು. ಈಗ ಅದನ್ನು ಕೆಲವರು ಸಾಗುವಳಿ ಮಾಡುತ್ತಿದ್ದು, ಅದು ಕಾನೂನು ಬಾಹಿರವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಈ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.