ಬೆಂಗಳೂರು:- ರಾಜ್ಯ ಬಿಜೆಪಿಯ ನೊಗ ಹೊತ್ತ ಬಿ.ವೈ.ವಿಜಯೇಂದ್ರ ಮೊದಲ ದಿನದಿಂದಲೇ ತಮ್ಮ ಕಾರ್ಯಶೈಲಿಯನ್ನು ನಾಡಿಗೆ ಪರಿಚಯಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಮಾತನಾಡಿದ ವಿಜಯೇಂದ್ರ, ರಾಷ್ಟ್ರೀಯ ನಾಯಕರು, ಸಂಘ ಪರಿವಾರದ ಪ್ರಮುಖರು, ಕಾರ್ಯಕರ್ತರು ಇಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸೋಲಿನ ಕಹಿ ಒಪ್ಪಿಕೊಂಡು ಮುಂದಿನ ಜಯಕ್ಕೆ ಹೋರಾಡುತ್ತೇನೆ. ಆ ಜಾತಿ ಈ ಜಾತಿ ಎನ್ನದೇ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುತ್ತೇನೆ ಎಂದು ತಿಳಿಸಿ, ಎಲ್ಲರನ್ನೂ ಒಳಗೊಳ್ಳುವ ನಾಯಕನಾಗಲು ಸಹಕಾರ ಯಾಚಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು. ನಾವೇನು ಆಪರೇಷನ್ ಕಮಲ ಮಾಡಲ್ಲ. ಆಡಳಿತ ಪಕ್ಷದ ಶಾಸಕರೇ ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ವಣವಾಗಿದೆ. ಶಾಸಕರಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ದುಷ್ಟ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.
ಉಪ ಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿ ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದ ಬಿ.ವೈ ವಿಜಯೇಂದ್ರ ಮುಂದೆ ಬೆಟ್ಟದಷ್ಟು ಸವಾಲಿದೆ. ಲೋಕಸಭಾ ಚುನಾವಣೆಗೆ ಸಂಘಟನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯತಂತ್ರ ರೂಪಿಸ ಬೇಕಾಗಿದೆ. ರಾಜ್ಯದುದ್ದಗಲಕ್ಕೂ ತಮ್ಮ ನೆಟ್ವರ್ಕ್ ಸಕ್ರಿಯಗೊಳಿ, ವರಿಷ್ಠರ ಜತೆ ಉತ್ತಮ ಸಂಪರ್ಕ ಇಟ್ಟುಕೊಂಡು ಸಮರ್ಥ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಬೇಕಾಗಿದೆ.