ಕೊಪ್ಪಳ :- BYV ರಾಜ್ಯಾಧ್ಯಕ್ಷರಾಗಿದಕ್ಕೆ ಖುಷಿಯೂ ಇಲ್ಲ, ಬೇಸರವೂ ಇಲ್ಲ ಸಮಚಿತ್ತದಲ್ಲಿರುವೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಖುಷಿ ಅಂತನೂ ಅಲ್ಲ. ಬೇಸರ ಅಂತನೂ ಅಲ್ಲ. ಸಮಚಿತ್ತದಲ್ಲಿ ಇದ್ದೇನೆ ಎಂದು ಹೇಳಬಹುದು. ಬಂದಿದ್ದನ್ನು ಸ್ವೀಕರಿಸುವ ಅಭ್ಯಾಸ ನನಗಿದೆ.
ಈ ಹುದ್ದೆ ನನಗೇ ಸಿಗಬೇಕಿತ್ತು ಎನ್ನುವ ನಿರೀಕ್ಷೆಯಲ್ಲಿ ನಾನೇನೂ ಇರಲಿಲ್ಲ. ಹಾಗಾಗಿಯೇ ನಾನು ಅದಕ್ಕಾಗಿ ಯಾವುದೇ ರೀತಿಯ ಪ್ರಯತ್ನ ಮಾಡಿಲ್ಲ. ರಾಜಕೀಯದಲ್ಲಿದ್ದವರು ಪ್ರಯತ್ನ ಮಾಡುವುದಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಆದರೆ, ಇದು ಸತ್ಯ. ರಾಜ್ಯಾಧ್ಯಕ್ಷ ಹುದ್ದೆ ಎನ್ನುವುದು ಅಧಿಕಾರವಲ್ಲ, ಒಂದು ಜವಾಬ್ದಾರಿ ಎಂಬ ಮಾತನ್ನು ಮೊದಲೇ ಹೇಳಿದ್ದೆ. ಅದನ್ನು ಪಕ್ಷದ ದೊಡ್ಡವರು ಕುಳಿತು ತಿರ್ಮಾನಿಸುವಂಥದ್ದು.
ಹಿಂದೆಯೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಹುದ್ದೆ ಬದಲಾವಣೆ ವೇಳೆಯೂ ನನ್ನ ಹೆಸರು ಕೇಳಿಬಂದಿತ್ತು. ರಾಜ್ಯಾಧ್ಯಕ್ಷ ಹುದ್ದೆಗೆ ನನ್ನ ಹೆಸರು ಕೇಳಿಬಂದಿದ್ದು ಇದೇ ಮೊದಲೇನಲ್ಲ. ಮೂರು ಬಾರಿ ಪ್ರಸ್ತಾಪವಾಗಿತ್ತು. ಆ ಸ್ಥಾನವನ್ನು ವಹಿಸಿಕೊಳ್ಳುವ ಯೋಗ್ಯತೆ ಇದೆ ಎಂಬ ರೀತಿಯಲ್ಲಿ ನನ್ನ ಹೆಸರು ಪ್ರಸ್ತಾಪವಾಗಿದ್ದಕ್ಕೆ ಸಂತೋಷಪಡುತ್ತೇನೆ.
ಆರಂಭದಲ್ಲೂ ನಾನು ಅವರ ನೇಮಕ ಸ್ವಾಗತ ಮಾಡಿದ್ದೇನೆ. ಆದರೆ, ಕೆಲವು ಮಾಧ್ಯಮಗಳು ತಪ್ಪಾಭಿಪ್ರಾಯ ಬರುವಂತೆ ವಿಶ್ಲೇಷಣೆ ಮಾಡಿವೆ. ನಮ್ಮ ಹಿಂದಿನ ಟ್ರ್ಯಾಕ್ ರೆಕಾರ್ಡ್, ಹಿಂದೆ ಯಾವ್ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದೇವೆ ಎಂಬುದು ನಮ್ಮ ಪಕ್ಷ ನಿಷ್ಠೆಗಿರುವ ಅಳತೆಗೋಲು. ಆಂಜನೇಯನಿಗೆ ರಾಮನ ಮೇಲೆ ಇದ್ದಂಥ ನಿಷ್ಠೆ ಮತ್ತು ಭಕ್ತಿ ನಮಗೆ ಪಕ್ಷದ ಮೇಲಿದೆ. ಈಗ ಏನು ಅಂತ ನಾವು ಎದೆ ಬಗೆದು ತೋರಿಸಲು ಆಂಜನೇಯ ಅಲ್ಲ ಎಂದರು.