ವಿಜಯನಗರ:-ವಿಜಯನಗರ ಜಿಲ್ಲೆ ಶೈಕ್ಷಣಿಕವಾಗಿ 27 ನೇ ಸ್ಥಾನಕ್ಕೆ ಕುಸಿದ ಹಿನ್ನೆಲೆ ಡಿಡಿಪಿಐ ಮತ್ತು ಬಿಇಒ ಅಮಾನತ್ತಿಗೆ ಸಿಎಂ ಸೂಚನೆ ನೀಡಿದ್ದಾರೆ.
ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐ ಮತ್ತು ಬಿಇಒ ಅಮಾನತ್ತಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಸಭೆಯ ಮಧ್ಯದಲ್ಲೇ ದೂರವಾಣಿ ಮೂಲಕ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ಅಮಾನತ್ತಿಗೆ ಸೂಚಿಸಿದರು.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ಜಿಲ್ಲೆ 10ನೇ ಸ್ಥಾನದಿಂದ 27 ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಕ್ಕಾಪಟ್ಟೆ ಸಿಟ್ಟಾದ ಸಿಎಂ, ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು. ಎಸ್ಎಸ್ಎಲ್ಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಪ್ರಮಾಣ ಕುಸಿದಿರುವುದಕ್ಕೆ ನೀವೇ ಕಾರಣ. ನಿಮ್ಮ ಬಿಇಒ ಗಳು, ಶಿಕ್ಷಕರ ಪ್ರಯತ್ನ ಏನು? ಯಾವ ದಿಕ್ಕಿನಲ್ಲಿದೆ? ಈ ಕಳಪೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೀವೇ ಹೇಳಿ ಎಂದು ಸಿಎಂ ಡಿಡಿಪಿಐ ಗೆ ಪ್ರಶ್ನಿಸಿದರು.
ಈ ಬಾರಿ ಶೇ20 ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ ಎಂದು ಪ್ರಶ್ನಿಸಿದರು. 10ರಿಂದ 27ನೇ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಸಿಇಒ ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.