ಬೆಂಗಳೂರು: 1971, ಡಿಸೆಂಬರ್ 16ರಂದು ಭಾರತ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ್ದಾಗಿ ಘೋಷಿಸಿತು. ಆ ದಿನ ಪಾಕಿಸ್ತಾನಿ ಸೇನೆ ಭಾರತೀಯ ಸೇನೆಯ ಮುಂದೆ ಶರಣಾಯಿತು. ಪ್ರತಿ ವರ್ಷ ಡಿಸೆಂಬರ್ 16 ಅನ್ನು ವಿಜಯ್ ದಿವಸ್ ಆಗಿ ಆಚರಿಸಲಾಗುತ್ತದೆ. ಈ ದಿನದ ಮೂಲಕ 1971ರ ಪಾಕಿಸ್ತಾನದ ಮೇಲೆ ನಡೆದ ಯುದ್ಧದಲ್ಲಿ ಭಾರತದ ವಿಜಯದ ಸಂಕೇತ ಮತ್ತು ಬಾಂಗ್ಲಾದೇಶ ರಚನೆಯ ದಿನಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ದೇಶದ ರಕ್ಷಣಗೆ ಹೋರಾಡಿ ಸಾವನ್ನಪ್ಪಿದ ಯೋಧರ ತ್ಯಾಗ ಸ್ಮರಿಸಿ, ಅವರಿಗೆ ಗೌರವಿಸಲಾಗುವುದು.
Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
1971 ರ ಯುದ್ಧದಲ್ಲಿ ಭಾರತ ಪಾಕಿಸ್ತಾನದ ಎದುರು ಗೆಲುವು ಸಾಧಿಸಿ, 50 ವರ್ಷಗಳು ಪೂರ್ಣಗೊಂಡವು. ಆ ಯುದ್ಧದ ಪರಿಣಾಮವಾಗಿ ನೂತನ ದೇಶವಾಗಿ ಬಾಂಗ್ಲಾದೇಶ ಉದಯವಾಯಿತು. ಅಂದಿನಿಂದ ಈ ದಿನವನ್ನು ‘ವಿಜಯ ದಿವಸ್’ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ. ವಿಜಯ ದಿವಸದಂದು ರಕ್ಷಣಾ ಪಡೆಗಳ ತ್ಯಾಗವನ್ನು ನೆನೆಯಲಾಗುತ್ತದೆ.
ವಿಜಯ ದಿವಸ: ಇತಿಹಾಸ ಮತ್ತು ಪ್ರಾಮುಖ್ಯತೆ
1971ರ ಯುದ್ಧ ಕೇವಲ ಬಾಂಗ್ಲಾದೇಶದ ಉದಯಕ್ಕೆ ಮಾತ್ರ ಕಾರಣವಾಗಿದ್ದಲ್ಲ. ಅದರೊಡನೆ ಪಾಕಿಸ್ತಾನಕ್ಕೆ ಸಹಿಸಲಾರದ ಹೊಡೆತವನ್ನೂ ನೀಡಿತ್ತು. ಪಾಕಿಸ್ತಾನಿ ಸೇನೆಯ ಮಹಾ ದಂಡನಾಯಕ ಅಬ್ದುಲ್ಲಾ ಖಾನ್ ನಿಯಾಜಿ಼ ಭಾರತೀಯ ಸೇನೆ ಹಾಗೂ ಬಾಂಗ್ಲಾದೇಶದ ಮುಕ್ತಿ ಬಾಹಿನಿಯ ಬಳಿ ಶರಣಾಗತಿಗೆ ಸಹಿ ಹಾಕಿದ್ದು ಏಷ್ಯಾ ಉಪಖಂಡದಲ್ಲಿ ಭಾರತದ ನಾಯಕತ್ವಕ್ಕೆ ಭದ್ರ ಬುನಾದಿ ಹಾಕಿತ್ತು.
ಮೇಜರ್ ಜನರಲ್ ನಿಯಾಜಿ಼ ತನ್ನ 93,000 ಸೈನಿಕರ ಪಡೆಯೊಂದಿಗೆ ಭಾರತೀಯ ಸೇನಾ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಶರಣಾದರು. ಆಗ ಜಗಜಿತ್ ಸಿಂಗ್ ಅವರು ಭಾರತೀಯ ಸೇನೆಯ ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದರು. ಪಾಕಿಸ್ತಾನದ ಶರಣಾಗತಿ ಎರಡನೇ ಮಹಾಯುದ್ಧದ ಬಳಿಕದ ಅತಿದೊಡ್ಡ ಸಂಖ್ಯೆಯ ಸೇನಾ ಶರಣಾಗತಿ ಎನಿಸಿಕೊಂಡಿತು.
1971ರ ಯುದ್ಧ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷಿಕ ಬಹುಸಂಖ್ಯಾತರ ಮೇಲೆ ಪಾಕಿಸ್ತಾನ ಸೇನೆಯ ದುರ್ನಡತೆಯ ಕಾರಣದಿಂದ ಉಂಟಾಗಿತ್ತು. 1970ರಲ್ಲಿ ನಡೆದ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನ ಮೂಲದ, ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದ ಆವಾಮಿ ಲೀಗ್ ಜಯಶಾಲಿಯಾಗಿತ್ತು. ಆದರೆ ಪಾಕಿಸ್ತಾನಿ ಸೇನೆ ಬಲಪ್ರಯೋಗ ನಡೆಸಿ, ಆವಾಮಿ ಲೀಗ್ ಅಧಿಕಾರಕ್ಕೆ ಬರದಂತೆ ಮಾಡಲು ಪ್ರಯತ್ನಿಸಿತು. ಈ ದಾಳಿಗಳ ಪರಿಣಾಮವಾಗಿ ಅಸಂಖ್ಯಾತ ಬಾಂಗ್ಲಾದೇಶೀಯರು ಗಡಿ ದಾಟಿ ಭಾರತಕ್ಕೆ ಪಲಾಯನ ಮಾಡತೊಡಗಿದರು. ಇದು ಭಾರತ ಮಧ್ಯ ಪ್ರವೇಶಿಸುವುದು ಅನಿವಾರ್ಯವಾಗುವಂತೆ ಮಾಡಿತು.
ಪಾಕಿಸ್ತಾನ ಅನಿರೀಕ್ಷಿತವಾಗಿ ಭಾರತದ ವಾಯುನೆಲೆಗಳ ಡಿಸೆಂಬರ್ 3, 1971ರಂದು ದಾಳಿ ನಡೆಸಿತು. ಅದಾದ ಒಂದು ದಿನದ ಬಳಿಕ ಭಾರತ ಬಾಂಗ್ಲಾದೇಶೀ ರಾಷ್ಟ್ರೀಯವಾದಿಗಳಿಗೆ ಬೆಂಬಲ ನೀಡಲು ನಿರ್ಧರಿಸಿತು. ಅದರಂತೆ ಆಪರೇಶನ್ ಟ್ರೈಡೆಂಟ್ಗೆ ಚಾಲನೆ ನೀಡಿ, ಆಗಿನ ಪಶ್ಚಿಮ ಪಾಕಿಸ್ತಾನದಲ್ಲಿದ್ದ ಕರಾಚಿ ಬಂದರಿನ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತು. ಪೂರ್ವ ಪಾಕಿಸ್ತಾನದಲ್ಲಿ ಮುಕ್ತಿ ಬಾಹಿನಿಯ ಗೆರಿಲ್ಲಾ ಯೋಧರು ಭಾರತೀಯ ಸೇನೆಯೊಡನೆ ಕೈ ಜೋಡಿಸಿ, ಪಾಕಿಸ್ತಾನಿ ಸೇನೆಯನ್ನು ಸೋಲಿಸಿದರು.
ಪ್ರಮುಖ ವ್ಯಕ್ತಿಗಳು:
- ಇಂದಿರಾ ಗಾಂಧಿ: ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಪಾಕಿಸ್ತಾನದ ಮೇಲಿನ ಯುದ್ಧ ಮತ್ತು ಹೊಸ ಬಾಂಗ್ಲಾದೇಶ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವಹಿಸಿದರು.
- ಆರ್ ಎನ್ ಕಾವ್ : ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ಆರ್ಡಬ್ಲೂಎ (ರಾ) ಮುಖ್ಯಸ್ಥರಾಗಿದ್ದ ಆರ್ ಎನ್ ಕಾವ್ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸುವ ಜೊತೆಗೆ ಬಾಂಗ್ಲಾದೇಶ ನಿರ್ಮಾತೃತ ಎಂಬ ಹೆಸರನ್ನು ಪಡೆದರು.
- ಮುಜಿಬುರ್ ರೆಹಮನ್: ಬಾಂಗ್ಲಾದೇಶ ಲಿಬರೇಷನ್ ಚಳುವಳಿಯ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದು, ಪೂರ್ವ ಪಾಕಿಸ್ತಾನ ಮುಸ್ಲಿಂ ವಿದ್ಯಾರ್ಥಿಗಳ ಲೀಗ್ನ ಸಂಸ್ಥಾಪಕ ಜಂಟಿ ಕಾರ್ಯದರ್ಶಿಯಾಗಿದ್ದರು.
- ಯಹ್ಯಾ ಖಾನ್: ಪಾಕಿಸ್ತಾನದ ನಾಗರಿಕ ಯುದ್ಧ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದವರು. ಈ ಯುದ್ಧದ ಸೋಲಿನಿಂದ ಅವರು ಹುದ್ದೆಗೆ ರಾಜೀನಾಮೆ ನೀಡಿದರು.
- ಸ್ಯಾಮ್ ಮಣಿಕ್ ಶಾ: 1971 ಯುದ್ಧದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದವರು. ಭಾರತದ ಗೆಲುವಿಗೆ ಪ್ರಮುಖರಾದವರು. ಫೀಲ್ಡ್ ಮಾರ್ಷಲ್ ಸ್ಥಾನ ಪಡೆದ ಮೊದಲ ಭಾರತೀಯ ಸೇನಾ ಅಧಿಕಾರಿಯಾಗಿದ್ದಾರೆ. ಭಾರತ ವಿಜಯದ ವಾಸ್ತುಶಿಲ್ಪಿಯಾದರು.