ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ತಾಯಿ ಜೊತೆ ಮಹಾಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಫ್ಯಾಮಿಲಿ ಜೊತೆ ಕಾಲ ಕಳೆಯುವ ವಿಜಯ್ ದೇವರಕೊಂಡ ಇದೀಗ ಶೂಟಿಂಗ್ ಗೆ ಬ್ರೇಕ್ ಹಾಕಿ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ತಮ್ಮ ತಾಯಿ ಮಾಧವಿ ಅವರೊಂದಿಗೆ ಭಾನುವಾರ (ಫೆಬ್ರವರಿ 9) ಮಧ್ಯಾಹ್ನ ಪ್ರಯಾಗ್ರಾಜ್ಗೆ ತೆರಳಿ ವಿಜಯ್ ದೇವರಕೊಂಡ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಕೇಸರಿ ಬಟ್ಟೆ ಹಾಗೂ ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ. ತಾಯಿ ಮಾಧವಿ ಜೊತೆ ವಿಜಯ್ ದೇವರಕೊಂಡು ಅವರು ಪ್ರಾರ್ಥನೆ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಇದಕ್ಕೂ ಮುನ್ನ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಫೋಟೋಗಳು ಕೂಡ ವೈರಲ್ ಆಗಿದ್ದವು.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಅವರು ತೊಡಗಿಕೊಂಡಿದ್ದಾರೆ. ಲೈಗರ್ ಸಿನಿಮಾದ ಸೋಲಿನ ಬಳಿಕ ವಿಜಯ್ ದೇವರಕೊಂಡ ಹೇಳಿಕೊಳ್ಳುವ ಮಟ್ಟಿಗಿನ ಹಿಟ್ ಸಿನಿಮಾಗಳನ್ನು ನೀಡಿಲ್ಲ. ಹೀಗಾಗಿ ವಿಜಯ್ ಗೆ ದೊಡ್ಡದೊಂದು ಹಿಟ್ ಸಿನಿಮಾ ಬೇಕಾಗಿದೆ. ಸದ್ಯ ವಿಜಯ್ ೧೨ನೇ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಚಿತ್ರಕ್ಕೆ ತಾತ್ಕಾಲಿಕವಾಗಿ ‘VD12’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದ ಶೀರ್ಷಿಕೆ ಮತ್ತು ಟೀಸರ್ ಫೆಬ್ರವರಿ 12ರಂದು ಅನಾವರಣ ಆಗಲಿದೆ. ಅದಕ್ಕೂ ಮುನ್ನ ವಿಜಯ್ ದೇವರಕೊಂಡ ಅವರು ಮಹಾಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಿದ್ದಾರೆ.
ವೈಯಕ್ತಿಕ ಜೀವನದ ಕಾರಣದಿಂದಲೂ ಅವರು ಸಾಕಷ್ಟು ಸುದ್ದಿ ಆಗುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಹೆಚ್ಚು ಆಪ್ತವಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಪುಷ್ಪ ೨ ಸಿನಿಮಾವನ್ನು ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ವೀಕ್ಷಿಸಿದ್ದರು.