ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ದಿ ಫ್ಯಾಮಿಲಿ ಸ್ಟಾರ್ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಆದರೆ ಅಂದುಕೊಂಡ ಮಟ್ಟಿಗೆ ಚಿತ್ರ ಓಪನಿಂಗ್ಸ್ ಪಡೆದುಕೊಂಡಿಲ್ಲ. ಇದೇ ಕಾರಣದಿಂದಾಗಿ ಚಿತ್ರಕ್ಕೆ ಸಾಕಷ್ಟು ಟ್ರೋಲಿಗರ ಕಾಟ ಶುರುವಾಗಿದೆ . ಟ್ರೋಲ್ ಮಾಡುವವರ ವಿರುದ್ಧ ದಿ ಫ್ಯಾಮಿಲಿ ಸ್ಟಾರ್ ಚಿತ್ರತಂಡ ತಿರುಗಿ ಬಿದ್ದಿದೆ. ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ವಿಜಯ್ ದೇವರಕೊಂಡ ಅವರನ್ನು ಒಂದು ವರ್ಗದ ನೆಟ್ಟಿಗರು ದ್ವೇಷಿಸುತ್ತಾರೆ. ಇದರಿಂದಾಗಿ ಅವರ ಸಿನಿಮಾಗೆ ಪೆಟ್ಟು ಬಿದ್ದಿದೆ. ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾವನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದವರ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಚಿತ್ರತಂಡ ನಿರ್ಧರಿಸಿದೆ. ವಿಜಯ್ ದೇವರಕೊಂಡ ಅವರ ಮ್ಯಾನೇಜರ್ ಹಾಗೂ ಅಭಿಮಾನಿ ಸಂಘದ ಅಧ್ಯಕ್ಷರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ದೂರಿನ ಜೊತೆಗೆ ಅನೇಕ ಸಾಕ್ಷಿಗಳನ್ನು ನೀಡಲಾಗಿದೆ. ಟ್ರೋಲ್ ಮಾಡಿದ ಸೋಶಿಯಲ್ ಮೀಡಿಯಾ ಖಾತೆಗಳ ಸ್ಕ್ರೀನ್ ಶಾಟ್ಗಳನ್ನು ಪೊಲೀಸರಿಗೆ ನೀಡಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಿಲ್ಲ. ಇದು ಚಿತ್ರತಂಡಕ್ಕೆ ಸಹಜವಾಗಿಯೇ ಬೇಸರ ಮೂಡಿಸಿರುತ್ತದೆ.
‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ. ದಿಲ್ ರಾಜು ನಿರ್ಮಾಣ ಮಾಡಿದ್ದು, ಪರಶುರಾಮ್ ನಿರ್ದೇಶನ ಮಾಡಿದ್ದಾರೆ.