ವಿಜಯ್ ದೇವರಕೊಂಡ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲನುಭವಿಸುತ್ತಿದೆ. ‘ಲೈಗರ್’ ಸಿನಿಮಾದ ಬಳಿಕ ವಿಜಯ್ ನಟನೆಯ ಸಿನಿಮಾಗಳು ಸೋಲುತ್ತಿದ್ದು ಇದರಿಂದ ವಿಜಯ್ ಚಿಂತಾಕ್ರಾಂತರಾಗಿದ್ದಾರೆ. ಈ ಮಧ್ಯೆ ವಿಜಯ್ ನಟನೆಯ ಹೊಸ ಸಿನಿಮಾದಿಂದ ನಟಿ ಶ್ರೀಲೀಲಾ ಹೊರ ಬಂದಿದ್ದು ಆ ಜಾಗಕ್ಕೆ ಹೊಸ ನಟಿಯೊಬ್ಬರ ಎಂಟ್ರಿಯಾಗಿದೆ ಎಂದು ಹೇಳಲಾಗುತ್ತಿದೆ.
‘ಫ್ಯಾಮಿಲಿ ಸ್ಟಾರ್’ ಸಿನಿಮಾದ ಬಳಿಕ ವಿಜಯ್ ಮುಂದಿನ ಸಿನಿಮಾದ ಕಡೆ ಗಮನ ಹರಿಸುತ್ತಿದ್ದಾರೆ. ಈ ಚಿತ್ರಕ್ಕೆ ಸದ್ಯಕ್ಕೆ ‘VD 12’ ಎಂದು ಟೈಟಲ್ ಇಡಲಾಗಿದೆ. ಇದೀಗ ಈ ಚಿತ್ರದಿಂದ ಶ್ರೀಲೀಲಾ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ.
ಶ್ರೀಲೀಲಾ ‘VD 12’ ಸಿನಿಮಾಗೆ ನಾಯಕಿ ಎಂದು ಮೊದಲೇ ಘೋಷಣೆ ಮಾಡಲಾಗಿತ್ತು. ಆದರೆ, ಸಿನಿಮಾ ಕಾರಣಾಂತರಗಳಿಂದ ವಿಳಂಬ ಆಗುತ್ತಲೇ ಬಂತು. ಹೀಗಾಗಿ, ಶ್ರೀಲೀಲಾ ಸಿನಿಮಾದಿಂದ ಹೊರ ನಡೆದರು. ಬದಲು ಬೇರೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ.
ಇತ್ತೀಚೆಗೆ ಮಲಯಾಳಂನಲ್ಲಿ ‘ಪ್ರೇಮಲು’ ಸಿನಿಮಾ ರಿಲೀಸ್ ಆಗಿ ಹಿಟ್ ಎನಿಸಿಕೊಂಡಿದೆ. ಈ ಚಿತ್ರದ ನಾಯಕಿ ಮಮಿತಾ ಬೈಜು ಅವರು ಚಿತ್ರದ ನಾಯಕಿ ಆಗಿ ಮಿಂಚಿದ್ದಾರೆ. ಅವರನ್ನು ‘VD 12’ಗೆ ಆಯ್ಕೆ ಮಾಡಿಕೊಳ್ಳಲು ಪ್ಲ್ಯಾನ್ ನಡೆದಿದೆ ಎನ್ನಲಾಗುತ್ತಿದೆ. ಮತ್ತೊಂದು ವರದಿ ಪ್ರಕಾರ ‘ಮಿಸ್ಟರ್ ಬಚ್ಚನ್’ ಸಿನಿಮಾದ ಭಾಗ್ಯಶ್ರೀ ಅವರನ್ನು ಕೂಡ ಚಿತ್ರತಂಡ ಭೇಟಿಯಾಗಿದೆ ಎನ್ನಲಾಗುತ್ತಿದೆ.
‘ಜರ್ಸಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಗೌತಮ್ ತಿನ್ನನುರಿ ಅವರು ‘VD 12’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಶ್ರೀಲೀಲಾ ಅವರು ಈಗಾಗಲೇ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಹೀಗಾಗಿ ಡೇಟ್ ವಿಳಂಬವಾದ ಕಾರಣದಿಂದ ನಟಿ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.