ನವದೆಹಲ್ಲಿ ನಡೆದ 2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ‘ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಭಾರತೀಯ ಚಿತ್ರರಂಗಕ್ಕೆ ಮಿಥುನ್ ಚಕ್ರವರ್ತಿ ನೀಡಿರುವ ಜೀವಮಾನದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಮಿಥುನ್ ಚಕ್ರವರ್ತಿ ಅವರ ಸ್ಫೂರ್ತಿದಾಯಕ ಸಿನಿ ಪಯಣ ಮುಂದಿನ ಪೀಳಿಗೆಯನ್ನು ಪ್ರೇರೇಪಿಸಲಿದೆ ಎಂದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆಯ ಜ್ಯೂರಿಗಳು ಅಭಿಪ್ರಾಯಪಟ್ಟಿದ್ದಾರೆ.
74ರ ಹರೆಯದ ನಟ 1976ರಲ್ಲಿ ಮೃಗಯಾ ಸಿನಿಮಾದ ಮೂಲಕ ಸಿನಿಪಯಣ ಆರಂಭಿಸಿದರು. ಚೊಚ್ಚಲ ಚಿತ್ರದಲ್ಲೇ ಅಮೋಘ ಅಭಿನಯದಿಂದ ಗಮನ ಸೆಳೆದ ನಟ, ಉತ್ತಮ ನಟ ಪ್ರಶಸ್ತಿ ಪಡೆದರು. ಡಿಸ್ಕೋ ಡ್ಯಾನ್ಸರ್, ಕಸಂ ಪೈದಾ ಕರ್ನೆ ವಾಲೆ ಕಿ, ಕಮ್ಯಾಂಡೋ, ಓ ಮೈ ಗಾಡ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಿಂದಿ ಮಾತ್ರವಲ್ಲದೇ ಬೆಂಗಾಳಿ ಚಿತ್ರಗಳಲ್ಲೂ ನಟಿಸಿದ್ದಾರೆ. ಇವರು ಪ್ರಮುಖ ಪಾತ್ರಗಳನ್ನು ಅಭಿನಯಿಸಿದ್ದ 19 ಸಿನಿಮಾಗಳು 1989ರಲ್ಲಿ ಒಂದೇ ವರ್ಷದ ತೆರೆಕಂಡಿದ್ದವು. ಹಾಗಾಗಿ, ಒಂದೇ ವರ್ಷ ಇಷ್ಟೊಂದು ಸಿನಿಮಾ ಬಿಡುಗಡೆಗೊಳಿಸಿದ ಕೀರ್ತಿ ಮಿಥುನ್ ಚಕ್ರವರ್ತಿ ಅವತಿಗೆ ಸಲ್ಲುತ್ತದೆ.
ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಮಿಥುನ್ ಚಕ್ರವರ್ತಿ ಗುರುತಿಸಿಕೊಂಡಿದ್ದಾರೆ. 2014ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲಕ ರಾಜ್ಯಸಭಾ ಸದಸ್ಯರಾಗಿ ಸಂಸತ್ ಪ್ರವೇಶಿ ಪಡೆದರು. ಆದ್ರೆ 2 ವರ್ಷಗಳ ನಂತರ ರಾಜೀನಾಮೆ ಸಲ್ಲಿಸಿದ್ದರು. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಇದೇ ವರ್ಷದ ಏಪ್ರಿಲ್ನಲ್ಲಿ ಮಿಥುನ್ ಚಕ್ರವರ್ತಿ ‘ಪದ್ಮಭೂಷಣ‘ ಗೌರವಕ್ಕೆ ಪಾತ್ರರಾಗಿದ್ದರು.