ಬೆಂಗಳೂರು:-ವಾಲ್ಮೀಕಿ ನಿಗಮದ ಹಣ ಲೂಟಿ ಹಲ್ಕಾ ಕೆಲಸ ಎಂದು ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ , ನಿಯಮ 69ರ ಅಡಿಯಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಪ್ರಕರಣ ಕುರಿತು ಚರ್ಚೆಗೆ ಅವಕಾಶ ಕೋರಿದರು. ಪ್ರಶ್ನೋತರ ಕಲಾಪ ಬಳಿಕ ಚರ್ಚೆಗೆ ಅವಕಾಶ ನೀಡಲಾಯಿತು.
ದಲಿತರ ಹಣ ಲೂಟಿ ಮಾಡಲಾಗಿದೆ. ಲೂಡಿ ಹೊಡೆದು ಬೇರೆ ರಾಜ್ಯಗಳಿಗೆ ಕಳಿಸಿಕೊಡಲಾಗಿದೆ. ಈತರಹದ ಹಗರಣ ರಾಜ್ಯದಲ್ಲಿ ಇದೇ ಮೊದಲು. ಕಟಾಕಟ್ ಅಂತ ನೂರಕ್ಕೆ ನೂರು ದಲಿತರ ಹಣ ಲೂಟಿ ಆಗಿದೆ. ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ. ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ. 187 ಕೋಟಿ ರೂ. ಕಟಾಕಟ್ ಅಂತ ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು. ಸರ್ಕಾರದ ಹೆಡ್ ಮಾಸ್ಟರ್ ಸಿಎಂ ಅವರೇ ಕೈಚೆಲ್ಲಿ ಕೂತಿದ್ರು ಎಂದರು. ಇದಕ್ಕೆ ಗರಂ ಆದ ಸಿಎಂ ನಾನು ವರ್ಗಾವಣೆ ಮಾಡು ಅಂತ ಹೇಳಿದ್ನಾ? ಎಂದು ತಿರುಗೇಟು ಕೊಟ್ಟರು. ಮತ್ತೆ ಮಾತು ಮುಂದುವರಿಸಿದ ಅಶೋಕ್, ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮಾಜಿ ಸಚಿವ, ಶಾಸಕ, ನಿಗಮದ ಅಧಿಕಾರಿಗಳು, ಹವಾಲಾ ದಂಧೆಕೋರರು, ಬ್ಯಾಂಕಿನವ್ರು ಈ ಐದು ವರ್ಗದವರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.