ಅಸಮರ್ಪಕ ಆಹಾರ ಶೈಲಿ, ನಿದ್ದೆ ಸರಿಯಾಗಿ ಮಾಡದಿರುವುದು, ಹೆಚ್ಚು ಕರಿದ ಆಹಾರಗಳ ಸೇವನೆಯಿಂದ ಹೊಟ್ಟೆಯಲ್ಲಿ ಸರಿಯಾಗಿ ಆಹಾರ ಜೀರ್ಣವಾಗದೆ ಮಲಬದ್ಧತೆ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಈ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಮಲಬದ್ಧತೆಯನ್ನು ಕಡೆಗಣಿಸಿದರೆ ಅದು ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಹೀಗಾಗಿ ಆರಂಭದ ಹಂತದಲ್ಲಿಯೇ ಮಲಬದ್ಧತೆಯನ್ನು ಸರಿಪಡಿಸಿಕೊಳ್ಳುವುದು ಉತ್ತಮವಾಗಿದೆ. ಪ್ರತಿನಿತ್ಯ ಮಲವಿಸರ್ಜನೆ ಸರಿಯಾಗಿ ಆಗಬೇಕೆಂದರೆ ಒಂದಷ್ಟು ಮನೆಮದ್ದುಗಳು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನ ಜ್ಯೂಸ್
ಮಲಬದ್ಧತೆ ಸಮಸ್ಯೆ ನಿವಾರಣೆಯಾಗಬೇಕೆಂದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು. ಮೈದಾ, ಕರಿದ ಆಹಾರಗಳನ್ನು ಹೆಚ್ಚು ಸೇವನೆ ಮಾಡಿದಾಗ ಅದು ಜೀರ್ಣವಾಗದೇ ಕರುಳಿಗೆ ಸುತ್ತಿಕೊಳ್ಳಬಹುದು. ಅದನ್ನು ಸರಿಪಡಿಸಲು ಸರಿಯಾದ ಆಹಾರ ಸೇವನೆ ಆಗತ್ಯವಾಗಿರುತ್ತದೆ. ಅದಕ್ಕೆ ಪಾಲಕ್ ಸೊಪ್ಪು ಸಹಾಯ ಮಾಡುತ್ತದೆ.
ಹೀಗೆ ಮಾಡಿ
ಪಾಲಕ್ ಸೊಪ್ಪನ್ನು ಮಿಕ್ಸಿ ಮಾಡಿ ಅದರ ರಸ ತೆಗೆದುಕೊಳ್ಳಿ. ನಂತರ ಅದಕ್ಕೆ ಅರ್ಧ ಚಮಚ ತುಪ್ಪವನ್ನು ಸೇರಿಸಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅದನ್ನು ಸೇವನೆ ಮಾಡಿ. ಮಲಬದ್ಧತೆ ಇರುವಾಗ ಸೇವನೆ ಮಾಡಿದರೆ ಮಲವಿಸರ್ಜನೆ ಸರಿಯಾಗಿ ಆಗುತ್ತದೆ.
ಮಜ್ಜಿಗೆ ಸೇವನೆ
ಸುಲಭವಾಗಿ ಸಿಗುವ ಆಹಾರ ಪದಾರ್ಥಗಳಲ್ಲಿ ಮಜ್ಜಿಗೆ ಕೂಡ ಒಂದು. ಪ್ರತಿನಿತ್ಯ ಮಜ್ಜಿಗೆಯನ್ನು ಸೇವನೆ ಮಾಡಿದರೆ ಹೊಟ್ಟೆಯ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. ಪ್ರತಿನಿತ್ಯ ಮಧ್ಯಾಹ್ನ ಊಟದ ಬಳಿಕ ಅರ್ಧ ಲೋಟದಷ್ಟು ಮಜ್ಜಿಗೆಯನ್ನು ತಪ್ಪದೆ ಸೇವನೆ ಮಾಡಿ. ಇದರಿಂದ ಮಲವಿಸರ್ಜನೆ ಸಲೀಸಾಗಿ ಆಗುತ್ತದೆ.
ಅಥವಾ ಮಜ್ಜಿಗೆಗೆ ಸ್ವಲ್ಪ ಶುಂಠಿ, ಚಿಟಿಕೆ ಉಪ್ಪು ಸೇರಿಸಿ ಮಸಾಲಾ ಮಜ್ಜಿಗೆ ರೂಪದಲ್ಲಿ ತಯಾರಿಸಿ ಸೇವನೆ ಮಾಡಿದರೂ ಒಳ್ಳೆಯದು. ಇದರಿಂದ ಮಲಬದ್ಧತೆಯನ್ನು ಸುಲಭವಾಗಿ ಹೊಡೆದೋಡಿಸಬಹುದಾಗಿದೆ.
ಒಣದ್ರಾಕ್ಷಿಯ ಸೇವನೆ
ರಾತ್ರಿ ಮಲಗುವ ಮುನ್ನ 8 ರಿಂದ 10 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಆ ನೀರು ಮತ್ತು ದ್ರಾಕ್ಷಿ ಎರಡನ್ನೂ ಸೇವನೆ ಮಾಡಿ. ಇದು ಹೊಟ್ಟೆಯಲ್ಲಿ ಗಟ್ಟಿಯಾದ ಮಲವನ್ನು ತೆಳುಗೊಳಿಸಿ ಸಲೀಸಾಗಿ ಹೊರಹೋಗುವಂತೆ ಮಾಡುತ್ತದೆ. ಚಿಕ್ಕಮಕ್ಕಳಿಗೆ ಮಲಬದ್ಧತೆಯಾದರೂ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ನೀಡಬಹುದು. ಆದರೆ ಪ್ರಮಾಣ ಕಡಿಮೆ ಇರಲಿ.
ನಾರಿನಾಂಶವಿರುವ ಆಹಾರ ಸೇವನೆ ಮಾಡಿ
ಫೈಬರ್ ಅಥವಾ ನಾರಿನಾಂಶವಿರುವ ಆಹಾರವನ್ನು ಹೆಚ್ಚು ಸೇವನೆ ಮಾಡಿದರೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು. ಅದಕ್ಕೆ ನಾರಿನಾಂಶವಿರುವ ತರಕಾರಿಗಳಾದ ಪಾಲಕ್, ಮೆಂತೆ, ಬೀನ್ಸ್, ಬ್ರೊಕೋಲಿಯಂತಹ ತರಕಾರಿಗಳನ್ನು ಆಗಾಗ ಸೇವನೆ ಮಾಡುತ್ತಿರಿ. ಇದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
ಹಣ್ಣುಗಳ ಜ್ಯೂಸ್
ಹಣ್ಣುಗಳ ಸೇವನೆಯಿಂದ ಮಲಬದ್ಧತೆಯನ್ನು ಸುಲಭವಾಗಿ ನಿವಾರಿಸಬಹುದಾಗಿದೆ. ಅದರಲ್ಲೂ ಮೂಸಂಬಿ ಜ್ಯೂಸ್ ಮಲವಿಸರ್ಜನೆಯನ್ನು ಸುಲಭವಾಗಿಸುತ್ತದೆ. ಇನ್ನು ಶುಗರ್ ಲೆವಲ್ ನಾರ್ಮಲ್ ಇದ್ದರೆ ಬಾಳೆಹಣ್ಣು, ಸೇಬು, ಪೈನಾಪಲ್, ಅವಕಾಡೋ, ಪಪ್ಪಾಯ, ಮರಸೇಬು, ಬೆರಿ ಹಣ್ಣುಗಳನ್ನು ಸೇವನೆ ಮಾಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.