ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಭೀರಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಅರಿಜೋನಾ ಸೇರಿ ಎಲ್ಲಾ 7 ನಿರ್ಣಾಯಕ ರಾಜ್ಯಗಳಲ್ಲಿ ಹಿಂದಿಕ್ಕಿ ಟ್ರಂಪ್ ಗೆಲುವು ಸಾಧಿಸಿದ್ದಾರೆ.
ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್ಸಿನ್, ನೆವಾಡ, ಅರಿಜೋನಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾವನ್ನು ನಿರ್ಣಾಯಕ ರಾಜ್ಯಗಳು ಎಂದು ಹೇಳಲಾಗುತ್ತಿತ್ತು.
ಟ್ರಂಪ್ಗೆ 312 ಎಲೆಕ್ಟರ್ಗಳು ಹಾಗೂ ಕಮಲಾ ಅವರಿಗೆ 226 ಎಲೆಕ್ಟರ್ಗಳ ಬೆಂಬಲ ದೊರೆತಿದೆ. ಅಧ್ಯಕ್ಷರಾಗಿ ಆಯ್ಕೆಯಾಗಲು ಒಟ್ಟು 538 ಎಲೆಕ್ಟರ್ಗಳ ಪೈಕಿ 270 ಎಲೆಕ್ಟರ್ಗಳ ಬೆಂಬಲದ ಅಗತ್ಯವಿತ್ತು. ಇದರೊಂದಿಗೆ ರಿಪಬ್ಲಿಕನ್ ಪಕ್ಷವು ಸೆನೆಟ್ನಲ್ಲಿ ಮತ್ತೆ ಹಿಡಿತ ಸಾಧಿಸಿದೆ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧತೆ ನಡೆಸಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಬಾರಿಗೆ ಅಧ್ಯಕ್ಷೀಯ ಗಾದಿ ಏರಿದ್ದಾರೆ. ಮ್ಯಾಜಿಕ್ ನಂಬರ್ 270 ಅನ್ನು ದಾಟಿರುವ ಟ್ರಂಪ್ ಅವರು,. 2025 ರ ಜನವರಿ 20 ರಂದು ಅಮೆರಿಕಾದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟ್ರಂಪ್ ಅವರು, ಮಾಜಿ ಅಧ್ಯಕ್ಷ ಗ್ರೋವರ್ ಕ್ಲೀವ್ಲ್ಯಾಂಡ್ ನಂತರ ಒಮ್ಮೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಬಿಡುವಿನ ನಂತರ ಮತ್ತೊಮ್ಮೆ ಅಧ್ಯಕ್ಷರಾದ ಎರಡನೇ ವ್ಯಕ್ತಿ ಆಗಲಿದ್ದಾರೆ. ಗ್ರೋವರ್ 1884 ಮತ್ತು 1892 ರ ಚುನಾವಣೆಗಳಲ್ಲಿ ಅಧ್ಯಕ್ಷರಾಗಿ ಗೆದ್ದಿದ್ದರು. ಟ್ರಂಪ್ 2016 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2020 ರಲ್ಲಿ ಜೋ ಬೈಡನ್ ವಿರುದ್ಧ ಸೋತಿದ್ದರು.