ಬೆಂಗಳೂರು;– ರಾಜಧಾನಿ ಬೆಂಗಳೂರಿನ ವಿವಿಧೆಡೆ ನಿನ್ನೆ ರಾತ್ರಿ ಹಲವು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ತಡರಾತ್ರಿ ಬಿಬಿಎಂಪಿಯ ವಾರ್ ರೂಂಗೆ ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್* ಅವರು ಭೇಟಿ ನೀಡಿದರು.
ಮಳೆಯಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ, ವಾರ್ ರೂಮ್ ಗೆ ಬಂದ ಕರೆ ಸ್ವೀಕರಿಸಿ ಮಾತನಾಡಿದರು.
ಬಿಬಿಎಂಪಿ ಕೇಂದ್ರ ಕಚೇರಿಯ ಕಂಟ್ರೋಲ್ ರೂಂ, ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಗಳಿಗೆ ಭೇಟಿ ನೀಡಿ ಮಳೆಯಿಂದ ಉಂಟಾದ ಅನಾಹುತಗಳ ಪರಿವೀಕ್ಷಣೆ ಮಾಡಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು, ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದರು.
8 ವಲಯಗಳ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಆಯಾ ವಲಯಗಳಲ್ಲಿ ನಿನ್ನೆ ರಾತ್ರಿಯಿಂದ ಇಂದು ಬೆಳಗಿನವರೆಗೆ ಕಾರ್ಯನಿರ್ವಹಿಸಿ, ಮಳೆಯಿಂದಾದ ಅನಾಹುತಗಳನ್ನು ಪರಿವೀಕ್ಷಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಂಜಿನಿಯರ್ಗಳು ಹಾಗೂ ಸಿಬ್ಬಂದಿ ತುರ್ತು ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಡೆ ಹಾನಿಯಾಗದಂತೆ ತುರ್ತು ಕೆಲಸ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದ ಕಡೆ ಸ್ವಲ್ಪ ಜಲಾವೃತವಾಗಿದೆ. ಆರ್.ಆರ್.ನಗರದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಕೆ.ಆರ್.ಸರ್ಕಲ್ ಅಂಡರ್ಪಾಸ್ ಬಗ್ಗೆಯೂ ಮಾಹಿತಿ ಪಡೆದಿದ್ದೇನೆ. ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.
ಮಳೆ ಬರುವ ನಿರೀಕ್ಷೆ ಇತ್ತು. ಟ್ರಾಫಿಕ್ ಸಮಸ್ಯೆ ಇರುತ್ತದೆ. ಯಾವುದೇ ಕಡೆ ಹಾನಿಯಾಗದಂತೆ ಎಮರ್ಜೆನ್ಸಿಗೆ ಸಿಬ್ಬಂದಿ, ಇಂಜಿನಿಯರ್ಸ, ಕೆಲಸ ಮಾಡುತ್ತಿದ್ದಾರೆ. ಯಾವ ವಲಯದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಬರುತ್ತಿದೆ ಅಂತ ಮಾಹಿತಿ ಪಡೆದಿದ್ದೇನೆ. ವಲಯ ಆಯುಕ್ತರು ನೋಡುತ್ತಿದ್ದಾರೆ ಎಂದರು.