ಇದು ಟೆಕ್ನಾಲಜಿ ಯುಗ. ಪ್ರತಿಯೊಂದು ಟೆಕ್ನಾಲಜಿಯಲ್ಲೇ ನಡೆಯುತ್ತಿದೆ. ಇದೀಗ ಬೆಂಗಳೂರಿನ ಆಟೋ ಚಾಲಕನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಟೋ ಚಾಲಕ ಬಾಡಿಗೆ ಪಾವತಿಗೆ ಯುಪಿಐ ಕ್ಯೂಆರ್ ಕೋಡ್ ಆಟೋದಲ್ಲಿ ಅಂಟಿಸಿಲ್ಲ, ಬದಲಾಗಿ ಈ ಚಾಲಕನ ಸ್ಮಾರ್ಟ್ವಾಚ್ನಲ್ಲಿ ಯುಪಿಐ ಕ್ಯೂಆರ್ ಕೋಡ್ ತೋರಿಸಿ ಪಾವತಿ ಮಾಡಿಸಿಕೊಳ್ಳುತ್ತಾನೆ. ಈ ಫೋಟೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಬೆಂಗಳೂರು ಐಟಿ ಸಿಟಿ. ಇಲ್ಲಿ ತಂತ್ರಜ್ಞಾನ, ತಾಂತ್ರಿಕ ವಿಚಾರಗಳಲ್ಲಿ ಇತರ ಎಲ್ಲಾ ನಗರಗಳಿಗಿಂತ ಮುಂದಿದೆ. ಇದು ಹಲವು ಬಾರಿ ಸಾಬೀತಾಗಿದೆ. ಈ ಪೈಕಿ ಇದೀಗ ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್ವಾಚ್ನಲ್ಲಿ ಯುಪಿಐ ಕ್ಯೂಆರ್ ಕೋಡ್ ಇದೀಗ ಭಾರಿ ಸದ್ದು ಮಾಡುತ್ತಿದೆ.
ಬೆಂಗಳೂರಿನ ಆಟೋ ಚಾಲಕ ಹೈಟೆಕ್ ತಂತ್ರಜ್ಞಾನ ಬಳಸಿಕೊಂಡಿದ್ದಾನೆ. ಯುಪಿಐ ಪಾವತಿಗೆ ಸಾಮಾನ್ಯವಾಗಿ ಆಟೋ ಚಾಲಕರು ತಮ್ಮ ಆಟೋದಲ್ಲಿ ಕ್ಯೂಆರ್ ಕೋಡ್ ಅಂಟಿಸಿರುತ್ತಾರೆ. ಅಥವಾ ಕ್ಯೂಆರ್ ಕೋಡ್ ಫೋಟೋವನ್ನು ಲ್ಯಾಮಿನೇಷನ್ ಮಾಡಿಸಿಕೊಂಡು, ಪ್ಲಾಸ್ಟಿಕ್ ಒಳಗೆ ಇಟ್ಟುಕೊಂಡಿರುತ್ತಾರೆ. ಆದರೆ ಈ ಆಟೋ ಚಾಲಕ ಹೀಗೆ ಮಾಡಿಲ್ಲ. ತಂತ್ರಜ್ಞಾನವನ್ನು ಮತ್ತಷ್ಟು ಸದುಪಯೋಗ ಪಡಿಸಿಕೊಂಡಿದ್ದಾನೆ.
ತನ್ನಲ್ಲಿರುವ ಸ್ಮಾರ್ಟ್ವಾಚ್ನಲ್ಲಿ ತನ್ನ ಯುಪಿಐ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡಿಸಿಕೊಳ್ಳುತ್ತಾನೆ. ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಸ್ಮಾರ್ಟ್ವಾಚ್ ಮೂಲಕ ಕೋಡ್ ತೋರಿಸಿ ಪಾವತಿಗೆ ಸುಲಭ ದಾರಿ ಅನುಸರಿಸಿದ್ದಾನೆ. ಈ ಫೋಟೋವನ್ನು ಬಿಜೆಪಿ ಕರ್ನಾಟಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಬೆಂಗಳೂರಿನ ಆಟೋ ಚಾಲಕರು ಹಲವು ಸ್ಮಾರ್ಟ್ ಮಾರ್ಗಗಳನ್ನು ತ್ವರಿತವಾಗಿ ಬಳಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿ ಭರಾಟೆ ಜೋರಾಗಿದ್ದ ವೇಳೆ ಬೆಂಗಳೂರಿನ ಆಟೋ ಚಾಲಕನೊಬ್ಬ ಕ್ರಿಪ್ಟೊಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದು ಬೋರ್ಡ್ ಅಂಟಿಸಿದ್ದ. ಕ್ರಿಪ್ಟೋ ಕರೆನ್ಸಿ ಬಗ್ಗೆ ಜನರು ತಿಳಿದುಕೊಳ್ಳುವ ವೇಳೆ ಆಟೋ ಚಾಲಕ ಬಾಡಿಗೆ ಪಾವತಿ ರೂಪದಲ್ಲಿ ಕ್ರಿಪ್ಟೋಕರೆನ್ಸಿ ಸ್ವೀಕರಿಸಲು ಮುಂದಾಗಿದ್ದ. ಈ ರೀತಿಯ ಹಲವು ತಂತ್ರಜ್ಞಾನ ಬಳಕೆಯಲ್ಲಿ ಬೆಂಗಳೂರು ಆಟೋ ಚಾಲಕರು ಎಲ್ಲರಿಗಿಂತ ಮುಂದಿದ್ದಾರೆ ಅನ್ನೋದು ಸಾಬೀತು ಮಾಡಿದ್ದಾರೆ.