ರಣ ರೋಚಕ ಪಂದ್ಯದಲ್ಲಿ 1 ರನ್ ಗಳಿಂದ ಡೆಲ್ಲಿ ವಿರುದ್ಧ ಯುಪಿ ವಾರಿಯರ್ಸ್ ಗೆದ್ದು ಬೀಗಿದೆ. ಈ ಮೂಲಕ ಯುಪಿ ವಾರಿಯರ್ಸ್ ತಂಡ ಲೀಗ್ನಲ್ಲಿ ತನ್ನ 3ನೇ ಗೆಲುವು ದಾಖಲಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.5 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಲಷ್ಟೇ ಶಕ್ತವಾಗಿ 1 ರನ್ಗಳಿಂದ ಸೋಲೊಪ್ಪಿಕೊಂಡಿತು.
ಪಂದ್ಯ ಕೈಚೆಲ್ಲಿದ ಡೆಲ್ಲಿ
ಇನ್ನು ಈ ಅಲ್ಪ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಕೊನೆಯ ಹಂತದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ತಂಡಕ್ಕೆ ಆರಂಭಿಕರಿಬ್ಬರು 21 ರನ್ಗಳ ಅಲ್ಪ ಜೊತೆಯಾಟದ ಆರಂಭ ನೀಡಿದರು. ಶಫಾಲಿ ವರ್ಮಾ 15 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಆಲಿಸ್ ಕ್ಯಾಪ್ಸಿ ಕೂಡ 15 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಕಳೆದ ಪಂದ್ಯದ ಗೆಲುವಿನ ರೂವಾರಿ ಜೆಮಿಮಾ ರಾಡ್ರಿಗಸ್ ಆಟವೂ 17 ರನ್ಗಳಿಗೆ ಕೊನೆಗೊಂಡಿತು. ಆದರೆ ಆರಂಭಿಕರಾಗಿ ಕಣಕ್ಕಿಳಿದು ಗೆಲುವಿಗಾಗಿ ಹೋರಾಡಿದ ನಾಯಕಿ ಮೆಗ್ ಲ್ಯಾನಿಂಗ್ 46 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 60 ರನ್ ಕಲೆಹಾಕಿದರು. ಕೊನೆಯಲ್ಲಿ ಡೆಲ್ಲಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದ ಜೆಸ್ ಜೊನಾಸೆನ್ ಹಾಗೂ ರಾಧಾ ಯಾದವ್ ತಲಾ ಒಂದೊಂದು ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ತಂಡದ ಸತತ ವಿಕೆಟ್ ಪತನದಿಂದಾಗಿ ಡೆಲ್ಲಿ ತಂಡ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.