ಬೆಂಗಳೂರು:: “ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಇದೇ ಜ .21 ರಂದು ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ನೆಲಮಂಗಲ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
“ಗಾಂಧಿ ಭಾರತ ಕಾರ್ಯಕ್ರಮವನ್ನು ಪಕ್ಷ ಈಗಾಗಲೇ ಆರಂಭಿಸಿದ್ದು, ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಕಳೆದ ಡಿಸಂಬರ್ 26ಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ಅಂದು ಸಂಜೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನರಾದ ಹಿನ್ನೆಲೆಯಲ್ಲಿ ಮರುದಿನದ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು ಎಂದರು.
ಅನ್ನದಾತರ ಮೊಗದಲ್ಲೂ ನಗು ತರಿಸಿದ ಗುಲಾಬಿ..! 1 ಲಕ್ಷ ರೂ. ಖರ್ಚು ಮಾಡಿದ್ರೆ 7 ಲಕ್ಷ ಲಾಭ ಸಿಗೋದು ಪಕ್ಕಾ!
“ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗಿತ್ತು. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಚರ್ಚೆ ಮಾಡಿ ಇದೇ ತಿಂಗಳು 21ರಂದು ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. 1924ರ ಕಾಂಗ್ರೆಸ್ ಅಧಿವೇಶನದ ಕುರಿತ ಮಾಹಿತಿಗಳ ಪುಸ್ತಕ ಹಾಗೂ ಇತರೆ ಪುಸ್ತಕಗಳನ್ನು ಜ.21ರಂದು ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.
“21ರಂದು ಬೆಳಗ್ಗೆ ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ಶಾಸಕರಿಗೂ ಆಹ್ವಾನ ನೀಡಲಾಗುವುದು. ಅಂದು ಮಧ್ಯಾಹ್ನ 12 ಗಂಟೆಗೆ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಎಂಬ ಎಐಸಿಸಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 100 ಮಂದಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರೆ ನೀಡುತ್ತಿದ್ದೇವೆ. ಈ ಸಮಾವೇಶದಲ್ಲಿ ಬಾಗವಹಿಸುವ ನಾಯಕರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು” ಎಂದರು.
“ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ.13 ರಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು, ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರು, ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರು, ಮಾಜಿ ಮಂತ್ರಿಗಳು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಲಿದ್ದು, ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಈ ಮಧ್ಯೆ ಜ.15 ಹಾಗೂ 16ರಂದು ಎಲ್ಲಾ ಶಾಸಕರು, ಪರಾಜಿತ ಅಭ್ಯರ್ಥಿಗಳು ತಮ್ಮ ಕಾರ್ಯಕ್ರಮ ರದ್ದು ಮಾಡಿ ತಮ್ಮ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಪೂರ್ವಭಾವಿ ಸಭೆ ನಡೆಸಬೇಕು. ಈ ಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ಪದಾಧಿಕಾರಿಗಳು, ಉಸ್ತುವಾರಿ ಹಾಗೂ ವೀಕ್ಷಕರು ಭಾಗವಹಿಸಲಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಮಂತ್ರಿಗಳು, ಶಾಸಕರು. ಪರಿಷತ್ ಸದಸ್ಯರು, ವಿವಿಧ ಸಮಿತಿಗಳ ಸದಸ್ಯರು ತಮ್ಮ ಜವಾಬ್ದಾರಿ ಮುಂದುವರಿಸಬೇಕಿದೆ” ಎಂದು ಕರೆ ನೀಡಿದರು.