ಕೆಆರ್ ಪುರ:- ಅಧಿಕಾರಿಗಳ ಅವೈಜ್ಞಾನಿಕ ಬೂತ್ ಗಳ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಕೆಆರ್ ಪುರದ ಭಟ್ಟರಹಳ್ಳಿ ನಿವಾಸಿಗಳು ಮತದಾನ ಮಾಡಲು ನಾಲ್ಕರಿಂದ ಐದು ಕಿಲೋಮೀಟರ್ ಸುತ್ತುವಂತಾಗಿದ್ದು ಬೂತ್ ಗಳ ಬದಲಾವಣೆಯ ಕ್ರಮಕ್ಕೆ ಭಟ್ಟರಹಳ್ಳಿ ಗ್ರಾಮಸ್ಥರು ಚುನಾವಣಾ ಅಧಿಕಾರಿಗಳಿಗೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಐದಾರು ದಶಕಗಳ ಕಾಲದಿಂದಲೂ ಭಟ್ಟರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು ಈಗ ಏಕಾಏಕಿ ಮತಗಟ್ಟೆಯನ್ನ ಅವೈಜ್ಞಾನಿಕವಾಗಿ ಸ್ಥಳಾಂತರ ಮಾಡಿರುವುದನ್ನ ಖಂಡಿಸಿದ್ದಾರೆ.ಭಟ್ಟರಹಳ್ಳಿ ಗ್ರಾಮದಲ್ಲಿರುವ ಬೂತ್ ಅನ್ನು ರಾಷ್ಟ್ರೀಯ ಹೆದ್ದಾರಿ 75ರ ಮತ್ತೊಂದು ಬದಿಯಾದ ವಿನಾಯಕ ಬಡಾವಣೆಗೆ ವರ್ಗಾಯಿಸಿದ ಹಿನ್ನಲೆ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ನಮ್ಮ ಗ್ರಾಮದಲ್ಲೆ ಮತದಾನ ನಡೆಯುವಂತೆ ಚುನಾವಣಾ ಬೂತನ್ನ ಬದಲಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.ಬದಲಾವಣೆ ಮಡದಿದ್ದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಪ್ರತಿಭನೆ ಮಾಡಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆಯೂ ಸಹ ನೀಡಿದರು.
ಗ್ರಾಮಸ್ಥರಾದ ಭಟ್ಟರಹಳ್ಳಿ ಬಿ.ವಿ. ಮಂಜುನಾಥ ಅವರು ಮಾತನಾಡಿ, ನಮ್ಮ ತಾತ,ತಂದೆಯವ ಕಾಲದಿಂದಲೂ ನಮ್ಮ ಗ್ರಾಮದಲ್ಲೇ ಮತ ಚಲಾಯಿಸುತ್ತಿದ್ದೆವು ಆದರೆ ಈಗ ನಮ್ಮ ಗಮನಕ್ಕೆ ಬಾರದೆ ಏಕಾಏಕಿ ಸುಮಾರು ಆರು ಬೂತ್ ಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಟ್ಟರಹಳ್ಳಿಯಿಂದ ವಿನಾಯಕ ಬಡಾವಣೆಗೆ ವಾಹನಗಳಲ್ಲಿ ಹೋಗಬೇಕಾದರೆ ಸುಮಾರು
ಐದು ಕಿ.ಮೀ.ಸುತ್ತಿಬಳಸಿ ಹೋಗಬೇಕು, ಮತಗಟ್ಟೆಗೆ ನಡೆದುಕೊಂಡು ಹೋಗಬೇಕೆಂದರೆ ಮಧ್ಯೆ
ರಾಷ್ಟ್ರೀಯ ಹೆದ್ದಾರಿಯಿದ್ದು ಯಾವುದೇ ಸ್ಕೈ ವಾಕ್ ಇಲ್ಲ, ರಸ್ತೆ ದಾಟಲು ಹೋದಾಗ ಆಗುವ ಅನಾಹುತಗಳಿಗೆ ಹೊಣೆ ಯಾರು? ಬೂತ್ ಗಳನ್ನು ಬದಲಾಯಿಸುವ ಮುನ್ನ ಗ್ರಾಮಸ್ಥರ ಒಪ್ಪಿಗೆ ಪಡೆದಿದ್ದೀರ ಎಂದು ಪ್ರಶ್ನಿಸಿದರು.
ಈಗಾಗಲೇ ಮತ ಚಲಾವಣೆ ಸೇರಿಸಂತೆ ಮೂರು ದಿನ ಸಾಲು ಸಾಲು ರಜೆ ಇದೆ ಈಗಿರುವಾಗ ಐದು ಕಿ.ಮೀ.ಸುತ್ತಿ ಬಳಸಿ ಮತ ಚಲಾಯಿಸುವ ಬದಲು ಜನ ಪ್ರವಾಸಕ್ಕೆ ಯೋಜನೆ ಮಾಡಿಕೊಳ್ಳುತ್ತಿದ್ದಾರೆ, ರಾಜ್ಯದಲ್ಲಿ ಮತ ಚಲಾವಣೆ ಪರ್ಸೆಂಟೇಜ್ ಕಮ್ಮಿ ಆಗಲು ಇಂತಹ ಅಧಿಕಾರಿಗಳೇ ಕಾರಣ ಎಂದು ದೂರಿದರು.
ಭಟ್ಟರಹಳ್ಳಿ, ಸುಭಾಷ್ ನಗರ, ಗಾರ್ಡನ್ ಸಿಟಿ,ಜನತ ಕಾಲೋನಿ, ಪಿಆರ್ ಕಾಲೋನಿ, ಸೇರಿದಂತೆ ಹಲವು ಬಡಾವಣೆಗಳಲ್ಲಿನ ಮತದಾರರಿಗೆ ಇದರಿಂದ ತೊಂದರೆಯಾಗಲಿದೆ ಹಲವಾರು ವರ್ಷಗಳಿಂದ ಇಲ್ಲೇ ಮತ ಚಲಾವಣೆ ಮಾಡುತ್ತಿದ್ದೇವೆ ಇಲ್ಲಿ ಮತಚಲಾವಣೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಗಳು ಇದ್ದರೂ, ಈಗಿರುವಾಗ ಕೆಲ ರಾಜಕೀಯ ವ್ಯಕ್ತಿಗಳ ಮಾತುಗಳನ್ನು ಕೇಳಿ ಮತಗಟ್ಟೆಯನ್ನ ಬದಲಾವಣೆ ಮಾಡಿ ಮತದಾರರಿಗೆ ತೊಂದರೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಇದನ್ನು ಸರಿಪಡಿಸದಿದ್ದರೆ ಮತದಾನ ಬಹಿಷ್ಕರಿಸಿ ಚುನಾವಣಾ(ಬಿಬಿಎಂಪಿ) ಕಚೇರಿ ಎದುರು ಗ್ರಾಮಸ್ಥರೊಂದಿಗೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೂತ್ ಗಳ ಬದಲಾವಣೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವೆಂಕಿ,ರಮೇಶ್, ಮತ್ತಿತರರಿದ್ದರು.