ಕನ್ಯೆ ಸಿಗದ ಯುವ ರೈತರೇ ಇವರ ಟಾರ್ಗೆಟ್, ಮದುವೆ ಆಗದ ಗಂಡು ಮಕ್ಕಳೇ ಸ್ವಲ್ಪ ಹುಷಾರ್ ಆಗಿರ್ರಪ್ಪ. ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ ಜಾಲ ಪತ್ತೆ ಆಗಿದೆ.
ಯುವ ರೈತನಿಗೆ ಮೋಸ ಮಾಡಿದವಳು ಎರಡು ಮದುವೆ, ಎರಡು ಹೆಣ್ಮಕ್ಕಳು, ಅಷ್ಟೇ ಅಲ್ಲ ಇಬ್ಬರು ಮೊಮ್ಮಕ್ಕಳು ಹೊಂದಿದ ಅಜ್ಜಿ ಎಂದು ಗೊತ್ತಾಗಿದೆ.
ಮೇಲಾಗಿ ಮೋಸ ಹೋದ ರೈತನಿಗೆ 55 ಸಾವಿರ ರೂ. ಬೇಡಿಕೆ ಇಡುವುದರ ಮೂಲಕ ಮತ್ತೊಂದು ಮದುವೆ ಆಫರ್ ನೀಡಿದ್ದು ಬೆಳಕಿಗೆ ಬಂದಿದೆ.
ಜಿಲ್ಲೆಯ ಮುಧೋಳ ತಾಲ್ಲೂಕಿನ ಬಿದರಿ ಗ್ರಾಮದ ಸೋಮಶೇಖರ್ಗೆ ಕಳೆದ ಐದ ವರ್ಷದಿಂದ ಕನ್ಯೆ ಹುಡುಕುತ್ತಿದ್ದರು. ಆದರೆ ಸಿಕ್ಕರಲಿಲ್ಲ. ಇದನ್ನೆ ಅಸ್ತ್ರ ಮಾಡಿಕೊಂಡ ಆರೋಪಿಗಳಾದ ಸತ್ಯಪ್ಪ, ಸಂಜು ಸಿದ್ದಪ್ಪ, ರವಿ ಮದುವೆಯಾದ ಮಂಜುಳಾ, ಸಂಬಂಧಿಕರ ಸೋಗಿನಲ್ಲಿ ಬಂದ ಲಕ್ಷ್ಮಿ, ನಾಗವ್ವ ಸೇರಿ ಏಳು ಜನರು ವಂಚನೆ ಎಸಗಿದ್ದಾರೆ.
ಸೋಮಶೇಖರ್ ಕಡೆಯಿಂದ 4-5 ಸಾವಿರ ರೂ. ಹಣ ಪಡೆದು ವಂಚಿಸಿದ್ದಾರೆ. ಮದುವೆಯಾಗಿ ತಿಂಗಳ ನಂತರ ಮಂಜುಳಾ ಎರಡು ಮದುವೆಯಾಗಿದ್ದು, ಇಬ್ಬರು ಹೆಣ್ಮಕ್ಕಳು, ಇಬ್ಬರು ಮೊಮ್ಮಕ್ಕಳು ಹೊಂದಿದ್ದಾಳೆ ಎಂದು ಗೊತ್ತಾಗಿದೆ.
ಕನ್ಯೆ ಸಿಗದ ಯುವ ರೈತರಿಗೆ ವಂಚನೆ ಮಾಡುವ ವ್ಯವಸ್ಥಿತ ಜಾಲ ಉತ್ತರ ಕರ್ನಾಟಕದಲ್ಲಿ ಬೀಡುಬಿಟ್ಟಿದೆ ಎಂಬ ಸಂಶಯ ಶುರುವಾಗಿದೆ. ಯುವ ರೈತರಿಗೆ ವಂಚನೆ ಮಾಡುವ ಜಾಲ ಸದ್ದಿಲ್ಲದೆ ಬೀಡುಬಿಟ್ಟ ಲಕ್ಷಣಗಳು ಕಂಡುಬಂದಿವೆ. ಇವರು ಎಷ್ಟು ಭಂಡರೆಂದರೆ ಸೋಮಶೇಖರ್ಗೆ ಮಂಜುಳಾ ಕೈಕೊಟ್ಟ ಬೆನ್ನಲ್ಲೇ ಇನ್ನು 55 ಸಾವಿರ ರೂ. ಕೊಡು ಇನ್ನೊಬ್ಬಳ ಜೊತೆ ಮದುವೆ ಮಾಡಿಸುತ್ತೇವೆ ಎಂದು ಮತ್ತೊಬ್ಬ ಯುವತಿ ಕರೆತಂದು ನಿಲ್ಲಿಸಿದ್ದರಂತೆ.
ಕನ್ಯೆ ಸಿಗದ ಯುವರೈತರೇ ಇವರ ಟಾರ್ಗೆಟ್ ಆಗಿದ್ದಾರೆ. ಕನ್ಯೆ ಸಿಗದ ಯುವ ರೈತರ ಆಪ್ತರು, ಸಂಬಂಧಿಕರಿಗೆ ಆಮಿಷ ನೀಡಿ ಲಕ್ಷ ಲಕ್ಷ ರೂ. ಡೀಲ್ ಮಾಡ್ತಾರೆ. ಮೋಸ ಮಾಡೋದಕ್ಕೆ ಸೃಷ್ಟಿಯಾಗ್ತಾರೆ ವಧುವಿನ ನಕಲಿ ಸಂಬಂಧಿಕರು. ಇಲ್ಲಿ ನಕಲಿ ಚಿಕ್ಕಮ್ಮ, ದೊಡ್ಡಮ್ಮಂದಿರ ವೇಷದಲ್ಲಿ ಲಕ್ಷ್ಮಿ ಹಾಗೂ ನಾಗವ್ವ ಎಂಟ್ರಿ ಕೊಡ್ತಾರೆ. ಈ ಹಿಂದೆಯೂ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ.