ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ನಾಗ್ಪುರದಲ್ಲಿ ಕಂಗನಾ ರನೌತ್ ಮತ್ತು ಅನುಪಮ್ ಖೇರ್ ಅವರೊಂದಿಗೆ ಕುಳಿತು ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿದರು. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಚಿತ್ರದ ವಿಶೇಷ ಸ್ಕ್ರೀನಿಂಗ್ನ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
“ಜನವರಿ 17ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರದ ಪ್ರದರ್ಶನದಲ್ಲಿ ನಿತಿನ್ ಜಿ ಅವರೊಂದಿಗೆ” ಎಂದು ಕಂಗನಾ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಗಡ್ಕರಿ, “ಇಂದು ನಾಗ್ಪುರದಲ್ಲಿ ಟೀಂ ಕಂಗನಾ ಮತ್ತು ಅನುಪಮ್ ಖೇರ್ ಅಭಿನಯದ ‘ಎಮರ್ಜೆನ್ಸಿ’ ಚಲನಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ. ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಇಷ್ಟೊಂದು ಸತ್ಯಾಸತ್ಯತೆ ಮತ್ತು ಉತ್ಕೃಷ್ಟತೆಯೊಂದಿಗೆ ಪ್ರಸ್ತುತಪಡಿಸಿದ ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತದ ಇತಿಹಾಸದಲ್ಲಿನ ಮಹತ್ವದ ಅವಧಿಯೊಂದನ್ನು ಚಿತ್ರಿಸುವ ಈ ಚಿತ್ರವನ್ನು ಎಲ್ಲರೂ ನೋಡಬೇಕೆಂದು ನಾನು ಕರೆ ನೀಡುತ್ತೇನೆ” ಎಂದಿದ್ದಾರೆ.
ಖೇರ್ ಮತ್ತು ಕಂಗನಾ ಅಭಿನಯದ ಚಿತ್ರ ‘ಎಮರ್ಜೆನ್ಸಿ’ ಜನವರಿ 17ರಂದು ರಿಲೀಸ್ ಆಗಿಲಿದೆ. 1975ರಿಂದ 1977ರವರೆಗೆ 21 ತಿಂಗಳ ಕಾಲ ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಮತ್ತು ದೇಶದಲ್ಲಿ ಅದರಿಂದಾದ ಪರಿಣಾಮಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ.
ಚಿತ್ರದ ಬಗ್ಗೆ ಮಾತನಾಡಿದ ಕಂಗನಾ, “ಚಿತ್ರ ನಿರ್ಮಾಣದಲ್ಲಿ ಅನುಪಮ್ ಖೇರ್ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಖೇರ್ ಅವರನ್ನು ಚಿತ್ರದ ನಿಜವಾದ ಹೀರೋ ಎಂದು ಕರೆದ ಕಂಗನಾ, ಖೇರ್ ಕೈ ಜೋಡಿಸದಿದ್ದರೆ ಚಿತ್ರ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ” ಎಂದಿದ್ದಾರೆ.