ಬೆಂಗಳೂರು: ಕೇಂದ್ರ ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರ ಜತೆ ರಾಜ್ಯದ ಬರ ಪರಿಸ್ಥಿತಿ, ಕೊಬರಿ ಖರೀದಿ ಹಾಗೂ ಎಸ್ ಟಿ ಪ್ರವರ್ಗಕ್ಕೆ ಕಾಡುಗೊಲ್ಲ ಸಮುದಾಯವನ್ನು ಸೇರಿಸುವ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ಭಾನುವಾರ ಕೇಂದ್ರ ಸಚಿವರು ಮಾಜಿ ಪ್ರಧಾನಿಗಳ ನಿವಾಸಕ್ಕೆ ಸೌಹಾರ್ದ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಶೋಷಿತ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ಸೇರಿಸುವ ವಿಚಾರದಲ್ಲಿ ತಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದ ಬಗ್ಗೆ ಪ್ರಸ್ತಾಪ ಮಾಡಿದರು ಮಾಜಿ ಪ್ರಧಾನಿಗಳು.
ಈ ಬಗ್ಗೆ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ ಕೇಂದ್ರ ಸಚಿವರು; ಈ ಬಗ್ಗೆ ತಾವು ಸಲ್ಲಿಸಿದ ಮನವಿ ಪತ್ರವನ್ನು ಬುಡಕಟ್ಟು ಸಚಿವಾಲಯಕ್ಕೆ ಕಳಿಸಿದ್ದಾರೆ. ಆ ಬಗ್ಗೆ ಬಹಳ ಮಹತ್ವ ಕೊಟ್ಟು ಪರಾಮರ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಭೇಟಿಯ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕೇಂದ್ರ ಸಚಿವರು ಕೃಷಿ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಬಂದಿದ್ದರು. ಹಾಗೇ ಮಾಜಿ ಪ್ರಧಾನಿಗಳ ನಿವಾಸಕ್ಕೆ ಗೌರವಪೂರ್ವಕವಾಗಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಜ್ಯದ ರೈತರ ಸಂಕಷ್ಟದ ಬಗ್ಗೆ ವಿವರಣೆ ನೀಡಲಾಯಿತು. ನಾವು ಪ್ರಧಾನಿಗಳನ್ನು ಭೇಟಿಯಾದಾಗ ಕೊಬ್ಬರಿ ಬೆಲೆ ಏರಿಕೆಗೆ ಮನವಿ ಮಾಡಿದ್ದೆವು. ಈ ತಿಂಗಳ 15- 16ಕ್ಕೆ ನವದೆಹಲಿಗೆ ಬರುವಂತೆ ಕೇಂದ್ರ ಸಚಿವರು ಹೇಳಿದ್ದಾರೆ. ನಾನು ಹೋಗುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.