ಕೀವ್: ಇದ್ದಕ್ಕಿದ್ದಂತೆ ಅಂಡರ್ಗ್ರೌಂಡ್ ನೀರಿನ ಪೈಪ್ ಸ್ಫೋಟಗೊಂಡು ಕಾರುಗಳ ಗಾಜು ಪುಡಿಪುಡಿಯಾಗಿ ಆಸ್ತಿಪಾಸ್ತಿಗೆ ನಷ್ಟವಾದ ಘಟನೆ ಸೋಮವಾರದಂದು ಉಕ್ರೇನ್ನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಉಕ್ರೇನ್ ರಾಜಧಾನಿ ಕೀವ್ನಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭೂಮಿ ನಡುಗುವಂತೆ ಕಾಣಿಸಿದ್ದು ಇದ್ದಕ್ಕಿದ್ದಂತೆ ನೀರಿನ ಪೈಪ್ ಸ್ಫೋಟಗೊಂಡು ರಸ್ತೆ ತುಂಬಾ ಕೆಸರು ಹರಿದಿದೆ.
ಸ್ಫೋಟದ ರಭಸಕ್ಕೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜು ಹಾಗೂ ಅಕ್ಕಪಕ್ಕದ ಮನೆಗಳ ಗಾಜುಗಳು ಪುಡಿಪುಡಿಯಾಗಿದೆ. ವಿಡಿಯೋದ ಆರಂಭದಲ್ಲಿ ರಸ್ತೆ ಪಕ್ಕದಲ್ಲೇ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರೋದನ್ನು ಕಾಣಬಹುದಾಗಿದ್ದು, ಸ್ಫೋಟದ ನಂತರ ಸಿಸಿಟಿವಿ ಕ್ಯಾಮೆರಾ ಕಡೆಗೆ ಮಣ್ಣು ಸಿಡಿದಿದ್ದರಿಂದ ಆಕೆಗೆ ಏನಾಯಿತು ಎಂಬ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ಮತ್ತೊಂದು ಸಿಸಿಟಿವಿ ವಿಡಿಯೋದಲ್ಲಿ ಅಲ್ಲಿನ ನಿವಾಸಿಯೊಬ್ಬರು ಗಾಬರಿಯಿಂದ ಹೊರಬಂದು ನೋಡೋದನ್ನ ಕಾಣಬಹುದು.