‘ಬಿಗ್ ಬಾಸ್’ ಶೋನಿಂದ ಹೊರ ಬಂದ ಬಳಿಕ ಹಲವರಿಗೆ ಹಲವು ಆಫರ್ ಗಳು ಸಿಕ್ಕಿವೆ. ಬಿಗ್ ಬಾಸ್ ಬಳಿಕವೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರು ಹಲವರಿದ್ದಾರೆ. ಇದೀಗ ಆ ಸಾಲಿಗೆ ಬಿಗ್ ಬಾಸ್ ಸೀಸನ್ ೧೧ರ ಸ್ಪರ್ಧಿ ಉಗ್ರಂ ಮಂಜು ಸೇರ್ಪಡೆಯಾಗಿದಸ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯವರೆಗೂ ಇದ್ದು ಫೈನಲ್ ನಲ್ಲಿ ಹೊರ ಬಂದಿರುವ ಉಗ್ರಂ ಮಂಜು ಅವರಿಗೆ ಇದೀಗ ದೊಡ್ಡ ಬಜೆಟ್ ನ ಸಿನಿಮಾವೊಂದರಲ್ಲಿ ಆಫರ್ ಸಿಕ್ಕಿದೆ.
ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಉಗ್ರಂ ಮಂಜು ಬಿಗ್ ಬಾಸ್ನಲ್ಲಿ ಟಾಪ್ ಐದರಲ್ಲಿ ಇದ್ದರು. ಬಿಗ್ ಬಾಸ್ನಿಂದ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಈ ಕಾರಣದಿಂದ ಅವರಿಗೆ ಆಫರ್ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಜಿಮ್ಮಿ’ ಕೆಲಸಗಳು ವಿಳಂಬ ಆಗಿದೆ. ಹೀಗಾಗಿ, ‘ಮ್ಯಾಂಗೋ ಪಚ್ಚ’ ಅವರ ಮೊದಲ ಸಿನಿಮಾ ಆಗಲಿದೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಉಗ್ರಂ ಮಂಜು ಅವರು ಈ ಸಿನಿಮಾ ಸೆಟ್ನಲ್ಲಿ ಸೇರಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉಗ್ರಂ ಮಂಜು ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ‘ಮ್ಯಾಕ್ಸ್’ ಸಿನಿಮಾದಲ್ಲಿ ಅವರಿಗೆ ಪಾಸಿಟಿವ್ ರೋಲ್ ಸಿಕ್ಕಿತ್ತು. ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ಹಾಗೂ ‘ಸುಪ್ರಿಯಾ ಪಿಕ್ಚರ್ಸ್ ಸ್ಟುಡಿಯೋ’ ಒಟ್ಟಾಗಿ ಸಂಚಿತ್ ಅವರ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಿನಿಮಾದ ಕಥೆ ಮೈಸೂರಿನಲ್ಲಿ ಸಾಗಲಿದ್ದು, 90ರ ದಶಕದಲ್ಲಿ ಕಥೆ ಮೂಡಿ ಬಂದಿದೆ. ಚಿತ್ರಕ್ಕೆ ವಿವೇಕ್ ಆಕ್ಷನ್ ಕಟ್ ಹೇಳ್ತಿದ್ದಾರೆ.