ಬೆಳಗಾವಿ: ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಳ್ಳುವಲ್ಲಿ ಬೈಲಹೊಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ದೀಪಕ್ ಪವಾರ್, ರಾಹುಲ್ ಜಾಧವ್ ಬಂಧಿತ ಆರೋಪಿಗಳು.
ತಮ್ಮ ಕಚೇರಿಯಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಅವರು, “ಕಳೆದ ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ಆರಂಭದಲ್ಲಿ ಬೈಲಹೊಂಗಲ, ನೇಸರಗಿ ಸೇರಿ ಮತ್ತಿತರ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ, ಬೈಲಹೊಂಗಲ ಡಿವೈಎಸ್ಪಿ ರವಿ ನಾಯಕ ಮತ್ತು ಸಿಪಿಐ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದೆವು.
ಇದರಲ್ಲಿ ಸಿಪಿಐ ಸಾಲಿಮಠ ನೇತೃತ್ವದ ತಂಡ ಮಹಾರಾಷ್ಟ್ರ ರಾಜ್ಯದ ದೀಪಕ್ ಪವಾರ್, ರಾಹುಲ್ ಜಾಧವ್ ಎಂಬ ಅಂತಾರಾಜ್ಯ ಕಳ್ಳರನ್ನು ಬಂಧಿಸಿದೆ” ಎಂದರು.
ಬಂಧಿತರಿಂದ ಬೈಲಹೊಂಗಲ, ನೇಸರಗಿ, ಹುಕ್ಕೇರಿ ಮತ್ತು ಸಂಕೇಶ್ವರ ಠಾಣಾ ವ್ಯಾಪ್ತಿಯಲ್ಲಿ 10 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅದೇ ರೀತಿ ಮತ್ತೋರ್ವ ಪ್ರಮುಖ ಆರೋಪಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆತನನ್ನು ಶೀಘ್ರವೇ ಬಂಧಿಸಲಿದ್ದಾರೆ. ಬಂಧಿತ ಕಳ್ಳರ ಗ್ಯಾಂಗ್ ಬೆಳಗಾವಿ ನಗರದಲ್ಲಿ ಕಳ್ಳತನ ಮಾಡಿರುವ ಬಗ್ಗೆ ಯಾವುದೇ ಹೆಜ್ಜೆ ಗುರುತು ಪತ್ತೆಯಾಗಿಲ್ಲ” ಎಂದು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಮಧ್ಯರಾತ್ರಿ 1 ರಿಂದ 4ರ ವರೆಗೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ರಾತ್ರಿ ಹೊತ್ತು ಕಳ್ಳತನಗಳು ಸಂಭವಿಸದಂತೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೇ ಹಗಲಿನಲ್ಲೂ ಕೂಡ ಪೊಲೀಸರು ನಿಗಾವಹಿಸಿದ್ದಾರೆ. ಇನ್ನು ಚಿಕ್ಕೋಡಿ ಭಾಗದಲ್ಲಿ ನಡೆದ ಕಳ್ಳತನ ಪ್ರಕರಣಗಳ ಸಂಬಂಧವೂ ಕೆಲವೊಂದು ಸುಳಿವು ಪತ್ತೆಯಾಗಿದೆ.
ಒಂದು ತಂಡ ಹೊರ ರಾಜ್ಯದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ಆ ಪ್ರಕರಣಗಳನ್ನು ಭೇದಿಸುತ್ತೇವೆ. ಇನ್ನು ಜಿಲ್ಲೆಯಲ್ಲಿ ಸಿಸಿಟಿವಿಗಳ ಕೊರತೆಯಿದೆ. ಅಲ್ಲದೇ ಈಗ ಇರುವ ಬಹಳಷ್ಟು ಸಿಸಿಟಿವಿಗಳು ಹಾಳಾಗಿವೆ. ಹೊಸದಾಗಿ ಸಿಸಿಟಿವಿ ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿದ್ದೇವೆ” ಎಂದು ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದರು.
ಇದೇ ವೇಳೆ ಸಿಪಿಐ ಪಿ ವಿ ಸಾಲಿಮಠ ನೇತೃತ್ವದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನೆ ಸಲ್ಲಿಸಿದರು.