ರಾಮನಗರ:- ರಾಮನಗರ ತಾಲೂಕಿನ ಅಚ್ಚಲುದೊಡ್ಡಿ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜರುಗಿದೆ.
ಘಟನೆಯಲ್ಲಿ ಭೈರಪ್ಪ ಎಂಬವರ ಮಕ್ಕಳಾದ ಪ್ರದೀಪ್, ಭವ್ಯ ಮೃತರು. ಕಳೆದ ಒಂದು ವರ್ಷದ ಹಿಂದೆ ತಮಿಳುನಾಡಿನಿಂದ ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರೊಡನೆ ಇಲ್ಲಿಗೆ ಬಂದು ವಾಸವಾಗಿದ್ದರು. ಇಂದು ಬೆಳಿಗ್ಗೆ ಗೋವಿಂದ ಹಾಗೂ ಮಧು ಎಂಬವರ ಜೊತೆ ತನ್ನ ಇಬ್ಬರು ಮಕ್ಕಳನ್ನು ಬೈಕ್ನಲ್ಲಿ ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಅಚ್ಚಲುದೊಡ್ಡಿ ಗ್ರಾಮದ ರಸ್ತೆ ತಿರುವಿನಲ್ಲಿ ಬೈಕ್ಗೆ ಬಸ್ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಇನ್ನೂ ಅಪಘಾತಕ್ಕೆ ರಸ್ತೆ ತಿರುವಿನಲ್ಲಿರುವ ಗಿಡಗೆಂಟೆಗಳನ್ನು ತೆರವು ಮಾಡದಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಿರುವಿನಲ್ಲಿ ಎದುರಿಗೆ ಬರುವ ವಾಹನಗಳು ಗೊತ್ತಾಗದೇ ಅಪಘಾತ ಸಂಭವಿಸಿದೆ.