ಹೈದರಾಬಾದ್:- ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ.
ಗುರುಪ್ರೀತ್ ಸಿಂಗ್ ಮೃತ ಕಾರ್ಮಿಕ. ಮೃತದೇಹ ಯಂತ್ರದೊಳಗೆ ಸಿಲುಕಿಕೊಂಡಾಗ ಪತ್ತೆಯಾಗಿದೆ. ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹಾಗೂ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ದೋಮಲಪೆಂಟಾ ಬಳಿಯ ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ 56 ಕಾರ್ಮಿಕರು ಒಳಗೆ ಸಿಲುಕಿದ್ದರು. ಈ ಪೈಕಿ 48 ಜನರನ್ನು ಆರಂಭದಲ್ಲಿಯೇ ರಕ್ಷಿಸಲಾಗಿದ್ದು, 8 ಕಾರ್ಮಿಕರು ಸಿಲುಕಿಕೊಂಡಿದ್ದರು. ಕಾರ್ಮಿಕರನ್ನು ಪತ್ತೆಹಚ್ಚಲು ಕಳೆದ 17 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಭಾನುವಾರ ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ.
ಉಳಿದ ಕಾರ್ಮಿಕರಿಗಾಗಿ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಓರ್ವನ ಮೃತದೇಹ ಪತ್ತೆಯಾದ ಬಳಿಕ ಇನ್ನುಳಿದವರ ರಕ್ಷಣೆಗಾಗಿ ರೋಬೋಟ್ ಬಳಸಲು ರಾಜ್ಯ ಸರ್ಕಾರ ಯೋಜಿಸಿದ್ದು, 4 ಕೋಟಿ ರೂ. ಖರ್ಚು ಮಾಡಲಿದೆ.