ತುಮಕೂರು: ಪ್ಲಾಸ್ಟಿಕ್ ಬಾಟಲ್ʼಗಳನ್ನು ಉಪಯೋಗಿಸಿ ಗಿನ್ನಿಸ್ ದಾಖಲೆ ಮಾಡುವಲ್ಲಿ ತುಮಕೂರು ಸ್ಮಾರ್ಟ್ ಸಿಟಿ,ಮಹಾನಗರ ಪಾಲಿಕೆ ಯಶಸ್ವಿಯಾಗಿದೆ..ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಿ ತುಮಕೂರು ಎಂಬ ಕನ್ನಡ ಪದದ ಕಲಾಕೃತಿ ನಿರ್ಮಿಸುವ ಮೂಲಕ ತುಮಕೂರು ನಗರವನ್ನು ವಿಶ್ವ ಗಿನ್ನಿಸ್ ದಾಖಲೆಗೆ ಸೇರಿಸುವ ಪ್ರಯತ್ನ ಯಶಸ್ವಿಯಾಗಿದೆ..
ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪಾಲಿಕೆ ಆಯುಕ್ತರಾದ ಅಶ್ವಿಜಾ.ಬಿ.ವಿ. ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದೆ..ಕಳೆದ 20 ದಿನಗಳಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳ ಮನೆ, ಹೋಟೆಲ್, ರೆಸ್ಟೋರೆಂಟ್, ಫುಡ್ ಸ್ಟ್ರೀಟ್, ಕನ್ವೆನ್ಷನ್ ಹಾಲ್ ಗಳಿಂದ ಸಂಗ್ರಹಿಸಲಾದ ಏಕಬಳಕೆ ಬಾಟಲಿಗಳನ್ನು ಕಲಾಕೃತಿಗೆ ಬಳಸಲಾಗಿದೆ..ಈ ಹಿಂದೆ 14500 ಪ್ಲಾಸ್ಟಿಕ್ ಬಾಟಲಿ ಬಳಸಿ ಕತಾರ್ ದೇಶದಲ್ಲಿ ಕತಾರ್ ಎಂಬ ಆಂಗ್ಲ ಪದದ ಕಲಾಕೃತಿ ನಿರ್ಮಿಸಿ ಗಿನ್ನಿಸ್ ದಾಖಲೆಯಾಗಿತ್ತು,
ಈ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಲು ಅರ್ಧ ಲೀಟರ್ ಹಾಗೂ 1 ಲೀಟರ್ನ 1.5 ಲಕ್ಷ ಬಾಟಲಿಗಳನ್ನು ಬಳಸಿ ಪೌರ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ನಾಗರಿಕರು, ಎನ್ಸಿಸಿ, ಎನ್ಎಸ್ಎಸ್ ವಿದ್ಯಾರ್ಥಿಗಳು ಮತ್ತು ಸ್ವತಃ ಪಾಲಿಕೆ ಸದಸ್ಯರು ಪಾಲ್ಗೊಂಡು ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ಬರೆದಿದ್ದಾರೆ..ಈ ಕಲಾಕೃತಿ ನಿರ್ಮಾಣಕ್ಕೆ ಸಮಯದ ಮಿತಿ ನಿಗದಿಗೊಳಿಸಿರಲಿಲ್ಲ,
5 ರಿಂದ 8 ಗಂಟೆ ಸಮಯದಲ್ಲಿ ಕಲಾಕೃತಿ ನಿರ್ಮಿಸಲಾಯಿತು. ಲಂಡನ್ನಿಂದ ಆಗಮಿಸಿದ್ದ ತೀರ್ಪುಗಾರರ ಸಮಕ್ಷಮದಲ್ಲಿ ತುಮಕೂರು ಕಲಾಕೃತಿ ನಿರ್ಮಾಣವಾಯಿತು.ಅಂತಿಮವಾಗಿ ತೀರ್ಪುಗಾರರು ಗಿನ್ನಿಸ್ ದಾಖಲೆಯ ಪ್ರಕ್ರಿಯೆ ನಡೆಸಿ ಅಂತಿಮವಾಗಿ ತುಮಕೂರು ಕಲಾಕೃತಿ ಗಿನ್ನಿಸ್ ದಾಖಲೆಗೆ ಅರ್ಹ ಎಂಬುದನ್ನು ಘೋಷಿಸಿದರು..ಪಾಲಿಕೆ ಆಯುಕ್ತರ ಪರಿಸರ ಕಾಳಜಿ ಮತ್ತು ಗಿನ್ನಿಸ್ ದಾಖಲೆ ಬರೆಯಲು ತೆಗೆದುಕೊಂಡ ಮುತುವರ್ಜಿಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ..