ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕರಾಗಿ ಅಮೆರಿಕ ಕಾಂಗ್ರೆಸ್ ನ ಮಾಜಿ ಸದಸ್ಯೆ ಮತ್ತು ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಅವರನ್ನು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತುಳಸಿ ಗಬ್ಬಾರ್ಡ್ ಅವರನ್ನು “ಹೆಮ್ಮೆಯ ರಿಪಬ್ಲಿಕನ್” ಎಂದು ಬಣ್ಣಿಸಿರುವ ಟ್ರಂಪ್, ಗುಪ್ತಚರ ಸಮುದಾಯಕ್ಕೆ ಅವರ “ನಿರ್ಭೀತ ಚೇತನ” ನೆರವಾಗಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅವರು ತಮ್ಮ ಅಧಿಕೃತ ಪ್ರಚಾರ ಖಾತೆ ಟ್ರಂಪ್ ವಾರ್ ರೂಮ್ ಮೂಲಕ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದಾರೆ.
“ಅಮೆರಿಕ ಕಾಂಗ್ರೆಸ್ನ ಮಾಜಿ ಸದಸ್ಯೆ, ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಅವರನ್ನು ದೇಶದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರನ್ನಾಗಿ ನೇಮಕ ಮಾಡಲು ಅತೀವ ಸಂತಸವಾಗುತ್ತಿದೆ. ಎರಡು ದಶಕಗಳಿಗೂ ಅಧಿಕ ಕಾಲದಿಂದ ತುಳಿ ನಮ್ಮ ದೇಶಕ್ಕಾಗಿ ಮತ್ತು ಅಮೆರಿಕನ್ನರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನದ ಸ್ಪರ್ಧೆಯ ನಾಮನಿರ್ದೇಶನಕ್ಕೆ ಅವರು ಎರಡೂ ಪಕ್ಷಗಳಲ್ಲಿ ವಿಸ್ತೃತ ಬೆಂಬಲ ಹೊಂದಿದರು. ಇದೀಗ ಅವರು ಹೆಮ್ಮೆಯ ರಿಪಬ್ಲಿಕನ್!. ತುಳಸಿಯವರ ವರ್ಣರಂಜಿತ ವೃತ್ತಿ ಬದುಕಿನ ನಿರ್ಭೀತ ಚೇತನವನ್ನು ಅವರು ನಮ್ಮ ಗುಪ್ತಚರ ಸಮುದಾಯಕ್ಕೆ ತರಲಿದ್ದಾರೆ ಎನ್ನುವ ಖಾತರಿ ನನಗಿದೆ. ನಮ್ಮ ಸಂವಿಧಾನಾತ್ಮಕ ಹಕ್ಕುಗಳ ಚಾಂಪಿಯನ್ ಆಗಿ ದೃಢತೆಯ ಮೂಲಕ ಶಾಂತಿಯನ್ನು ಸಾಧಿಸಲಿದ್ದಾರೆ. ತುಳಸಿ ನಾವೆಲ್ಲರೂ ಹೆಮ್ಮೆಪಡುವಂತೆ ಮಾಡಲಿದ್ದಾರೆ” ಎಂದಿದ್ದಾರೆ.
2013 ರಿಂದ 2021ರವರೆಗೆ ಇವರು ಹವಾಯಿ 2ನೇ ಕಾಂಗ್ರೆಸ್ಸಿಯಲ್ ಜಿಲ್ಲೆಯ ಡೆಮಾಕ್ರಟಿಕ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದ ತುಳಸಿ ಅವರು 2022ರಲ್ಲಿ ಡೆಮಾಕ್ರಟಿಕ್ ಪಕ್ಷ ತೊರೆದಿದ್ದರು.